ಬೆಂಗಳೂರು : ಭಾರತದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಗಳ 6ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಅಂತರ್ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯದ 2 ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪುರಸ್ಕಾರ ಲಭಿಸಿದೆ. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ರಾಷ್ಟ್ರ ಮಟ್ಟದಲ್ಲಿ ನಡೆದ ಈ ವಿವಿಧ ಸ್ತರದ ಸ್ಪರ್ಧೆಗಳಲ್ಲಿ ತುಮಕೂರು ಸ್ಮಾರ್ಟ್ ಸಿಟಿಯ ಡಿಜಿಟಲ್ ಗ್ರಂಥಾಲಯ ಯೋಜನೆಗೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ ದೊರಕಿದೆ.
ಕೋವಿಡ್ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ನೀಡುವ ವಿಶೇಷ ಪುರಸ್ಕಾರ ಬೆಂಗಳೂರು ಸ್ಮಾರ್ಟ್ ಸಿಟಿಗೆ ಲಭಿಸಿದೆ. ಹಾಗೆಯೇ, ಕಾಮಗಾರಿಗಳಲ್ಲಿ ಪದವೀಧರರಿಗೆ ಕೆಲಸ ನೀಡಿ ಇಂಟರ್ನ್ಶಿಪ್ ನೀಡುವ ಯೋಜನೆಗೆ ಬೆಂಗಳೂರು ಸ್ಮಾರ್ಟ್ ಸಿಟಿಯನ್ನು ರನ್ನರ್ ಅಪ್ ಎಂದು ಘೋಷಿಸಲಾಗಿದೆ.
ಹವಾಮಾನ ಮೌಲ್ಯಮಾಪನಕ್ಕೆ ಸಂಬಂಧಿಸಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ರಾಷ್ಟ್ರ ಮಟ್ಟದಲ್ಲಿ 3 ನಕ್ಷತ್ರಗಳನ್ನು ನೀಡಲಾಗಿದೆ. ಈ ಪುರಸ್ಕಾರಗಳನ್ನು ಪಡೆದ ಬೆಂಗಳೂರು ಮತ್ತು ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಅಧ್ಯಕ್ಷರೂ ಆಗಿರುವ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಸ್ಮಾರ್ಟ್ ಸಿಟಿ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯಕ್ಕೆ ಎರಡು ಸ್ಥಾನ : ಸಚಿವ ಕೆ ಎಸ್ ಈಶ್ವರಪ್ಪ ಮನವಿ