ಬೆಂಗಳೂರು: ನಗರದ ಇಸ್ಕಾನ್ ದೇಗುಲಕ್ಕೆ ಕೋವಿಡ್ ಹಿನ್ನೆಲೆ ವಿಧಿಸಲಾಗಿದ್ದ ನಿರ್ಬಂಧವನ್ನ ಅಕ್ಟೋಬರ್ 5 ರಂದು ತೆರವುಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನ್ಲಾಕ್ 5.0 ಮಾರ್ಗಸೂಚಿ ಪ್ರಕಾರ ಧಾರ್ಮಿಕ ವಿಧಿವಿಧಾನಗಳ ಮೇಲೆ ವಿಧಿಸಿದ್ದ ನಿರ್ಬಂಧ ತೆಗೆದುಹಾಕಲಾಗಿದೆ.
ಶ್ರೀ ಕೃಷ್ಣನ ದರ್ಶನದ ವೇಳೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಸುರಕ್ಷಿತ ದೃಷ್ಟಿಯಿಂದ 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರ ಪ್ರವೇಶವನ್ನ ನಿಷೇಧಿಸಲಾಗಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕುರಿತು ಜನರಿಗೆ ಅರಿವು ಮೂಡಿಸಲು ಮಂದಿರದ ಮುಖ್ಯವಾದ ಸ್ಥಳಗಳಲ್ಲಿ ವಿವಿಧ ಚಿಹ್ನೆಗಳನ್ನ ಅಳವಡಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದೆ. ಎಂದಿನಂತೆ ಪುಸ್ತಕ ಮಳಿಗೆಗಳು ತೆರೆದಿದ್ದು, ದೇವಸ್ಥಾನದ ಕಲ್ಯಾಣ ಮಂಟಪ ಮುಂಗಡ ಕಾಯ್ದಿರಿಸಲು ಅವಕಾಶ ಇರಲಿದೆ.
ಭಕ್ತರು ಮಂದಿರದ ಅಧಿಕೃತ ವೆಬ್ ಸೈಟ್ https://www.iskconbangalore.org/ ಭೇಟಿ ನೀಡುವ ಮೂಲಕ ನಿತ್ಯ ದರ್ಶನ ಪಡೆಯಬಹುದು ಹಾಗೂ ಶ್ರೀಭಗವದ್ಗೀತೆ ಮತ್ತು ಶ್ರೀಮದ್ ಭಾಗವತ ಪ್ರವಚನಗಳಲ್ಲಿ ಪಾಲ್ಗೊಳ್ಳಬಹುದು.
ಸೋಮವಾರದಿಂದ ಶುಕ್ರವಾರದವರೆಗೆ: ಬೆಳಗ್ಗೆ 9: 30 ರಿಂದ ಮಧ್ಯಾಹ್ನ 12:30 ರವರೆಗೆ, ಸಂಜೆ 4 ರಿಂದ ರಾತ್ರಿ 8 ರವರೆಗೆ, ವಾರಾಂತ್ಯದಲ್ಲಿ ಬೆಳಗ್ಗೆ 9: 30 ರಿಂದ ರಾತ್ರಿ 8 ಗಂಟೆವರೆಗೆ ದೇವರ ದರ್ಶನ ಪಡೆಯಬಹುದು.