ಬೆಂಗಳೂರು: ಭಾರತ ಸರ್ಕಾರ ಇತ್ತೀಚೆಗೆ ವಿದೇಶಿ ಬಂಡವಾಳ ಹೂಡಿಕೆ ನಿಯಮಗಳನ್ನು ಬದಲಾಯಿಸಿದೆ. ಹೊಸ ನೀತಿಯ ಪ್ರಕಾರ ವಿದೇಶಿ ಬಂಡವಾಳ ಹೂಡಿಕೆಯನ್ನು ಭಾರತ ದೇಶದಲ್ಲಿ ಮಾಡಿದರೆ ನಮ್ಮ ದೇಶದ ನೆರೆ ರಾಷ್ಟ್ರಗಳಲ್ಲಿ ಮಾಡುವ ಹಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ವಿಶ್ಲೇಷಕ ಚಂದ್ರಶೇಖರ್ ಹೇಳಿದ್ದಾರೆ.
ಈ ಹೊಸ ನಿಯಮಗಳನ್ನು ಭಾರತ ಮಾಡಿದ್ದರ ಬಗ್ಗೆ ವಿದೇಶಾಂಗ ವ್ಯವಹಾರಗಳ ವಿಶ್ಲೇಷಕ ಚಂದ್ರಶೇಖರ್ ಈಟಿವಿ ಭಾರತ್ ಮೂಲಕ ಎಫ್ಡಿಐ ನಿಯಮಗಳ ಬದಲಾವಣೆ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಇಡೀ ಜಗತ್ತು ಕೋವಿಡ್-19ರ ಭೀತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಭಾರತದ ವೈದ್ಯಕೀಯ ಸಂಶೋಧನಾ ಸಂಸ್ಥೆಗಳನ್ನು ಗುರಿಯಾಗಿ ಇಟ್ಟುಕೊಂಡು ಕೆಲ ರಾಷ್ಟ್ರಗಳು ಈ ಸಂಸ್ಥೆಗಳನ್ನು ಕೊಂಡುಕೊಳ್ಳುವ ಹುನ್ನಾರ ಮಾಡುತ್ತವೆ.
ಇದರಿಂದ ಪಾರಾಗಲು ಭಾರತ ಸರ್ಕಾರ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಚಂದ್ರಶೇಖರ್ ವಿವರಿಸಿದ್ದಾರೆ. ವೈದ್ಯಕೀಯ ಸಂಸ್ಥೆಗಳಷ್ಟೇ ಅಲ್ಲದೆ ನಮ್ಮ ದೇಶದ ಟೆಲಿಕಾಂ ಸಂಸ್ಥೆಗಳು, ಜವಳಿ ಉದ್ಯಮ ಹಾಗೂ ಮುಖ್ಯವಾಗಿ ರಕ್ಷಣಾ ವಲಯ ದೇಶದ ಕಾರ್ಯತಂತ್ರವಾಗಿರುತ್ತದೆ.
ಎಲ್ಲಾ ಸಂಸ್ಥೆಗಳು ಹಾಗೂ ಕೈಗಾರಿಕೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು. ಈ ಹಿಂದೆ ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮಾಡಿದ ಸಂದರ್ಭದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುವಂತಿರಲಿಲ್ಲ. ಈಗ ಚೀನಾ ರಾಷ್ಟ್ರಕ್ಕೂ ಈ ನಿಯಮ ಭಾರತ ಸರ್ಕಾರ ವಿಸ್ತರಿಸಿದೆ. ಇದು ಭಾರತ ದೇಶದ ಸಾರ್ವಭೌಮತ್ವವನ್ನು ಕಾಪಾಡುವುದಕ್ಕೆ ಹಾಗೂ ನಮ್ಮ ಕೈಗಾರಿಕೆ ಮತ್ತು ಉದ್ಯಮಗಳನ್ನು ಕಾಪಾಡುವುದಕ್ಕೆ ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ.