ಬೆಂಗಳೂರು: ಕನ್ನಡದ ಅನುಷ್ಟಾನ ಐಎಎಸ್ ಅಧಿಕಾರಿಗಳ ಪಡೆಯ ಪ್ರಭಾವದಿಂದ ಸಾಧ್ಯವಾಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ ಎಸ್ ನಾಗಾಭರಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕನ್ನಡ ಅನುಷ್ಠಾನ ಪಾಲನೆ ಆಗದಿರುವ ಕಾರಣ 180 ಅಧಿಕಾರಿಗಳಿಗೆ ನೋಟಿಸ್ ಕೊಡಲಾಗಿದೆ. ಕ್ರಮ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದೆವು. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಐಎಎಸ್ ಅಧಿಕಾರಿಗಳ ಪಡೆಯಿಂದ ಅದು ಸಾಧ್ಯವಾಗುತ್ತಿಲ್ಲ. ಕನ್ನಡದ ಇಚ್ಛಾಶಕ್ತಿ ಇಲ್ಲದಿದ್ದಲ್ಲಿ ಅದು ನಡೆಯಲ್ಲ. ವ್ಯವಸ್ಥೆ, ತಮಗೆ ಬೇಕಾದ ಹಾಗೆ ಮುಖವಾಡವನ್ನು ಬದಲಾಯಿಸುತ್ತದೆ. ಎಲ್ಲಿ ಕನ್ನಡ ಬದ್ಧತೆ ಇರಲ್ಲ, ಅಲ್ಲಿ ಅನುಷ್ಠಾನ ಆಗಲ್ಲ. ಇದೇ ದೊಡ್ಡ ಮಟ್ಟದ ಹಿನ್ನಡೆಯಾಗುತ್ತದೆ. ದಂಡ ವಿಧಿಸುವ ಕೆಲಸವನ್ನೂ ಮಾಡಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಸ್ತುಕ್ರಮ ತೆಗೆದುಕೊಳ್ಳಲು ನಾನು ಸಿಫಾರಸು ಮಾಡಿದ್ದೇನೆ. ಆದರೆ, ಅದರ ಬಗ್ಗೆ ಏನು ಕ್ರಮ ಕೈಗೊಂಡಿಲ್ಲ. ಎಲ್ಲಿಯವರೆಗೆ ಕನ್ನಡ ಮನಸ್ಸು ಕೆಲಸ ಮಾಡಲ್ಲವೋ, ಕನ್ನಡದ ಬಗ್ಗೆ ಬದ್ಧತೆ ಇರುವುದಿಲ್ಲವೋ, ಅಲ್ಲಿವರೆಗೆ ಕನ್ನಡದ ಅನುಷ್ಟಾನ ಸಾಧ್ಯವಿಲ್ಲ. ಅಧಿಕಾರಿಗಳಿಗೆ ಕನ್ನಡದ ಇಚ್ಛಾಶಕ್ತಿ ಇಲ್ಲ. ಒಬ್ಬ ಡಿಸಿ ಮನಸು ಮಾಡಿದರೆ ಇಡೀ ಕ್ಷೇತ್ರವನ್ನು ಬದಲಾಯಿಸಬಹುದು. ಕನ್ನಡದ ಅನುಷ್ಠಾನಕ್ಕಾಗಿ ವಿಧೇಯಕ ಬೇಕು. ವಿಧೇಯಕ ಇಲ್ಲವಾದರೆ ಅನುಷ್ಠಾನ ಕಷ್ಟ ಸಾಧ್ಯವಾಗಲಿದೆ. ವಿಧೇಯಕದ ಮೂಲಕ ಕನ್ನಡ ಅನುಷ್ಠಾನ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕಾಯ್ದೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಸ್ವಾಯತ್ತತೆ ಸಂಸ್ಥೆ ಎಂದು ಹೇಳಲಾಗಿದೆ. ಆದರೆ, ಸಚಿವಾಲಯದ ಬಳಿ ಅನುದಾನಕ್ಕೆ ಕೇಳಿದರೆ ಹಣ ಬಿಡುಗಡೆ ಆಗಲ್ಲ. ಹಣ ಬಿಡುಗಡೆ ವಿಳಂಬವಾಗುತ್ತದೆ. ನಮ್ಮ ಪ್ರಾಧಿಕಾರದ ಟೆಂಡರ್ ಆಗೋಕೆ ಮೂರು ತಿಂಗಳು ಬೇಕು. ಈ ರೀತಿಯಾಗಿ ಆದರೆ ಇನ್ನೇನು ಮಾಡಲು ಸಾಧ್ಯ ಎಂದು ಅಸಹಕಾರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನ್ನಡಕ್ಕೆ ಕಾನೂನಿನ ಬಲ ಬೇಕು: ಟಿ.ಎಸ್ ನಾಗಾಭರಣ