ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಬೇಕು ಎಂದು ಎಲ್ಲರಿಗೂ ಆಸೆ ಇರುತ್ತೆ. ಹಿಂದಿನ ಸಂಪುಟದಲ್ಲಿ ನನ್ನ ಕೆಲಸ ಮೆಚ್ಚಿ ವರಿಷ್ಠರು, ರಾಜ್ಯದ ನಾಯಕರು, ನೂತನ ಸಿಎಂ ಮತ್ತೊಮ್ಮೆ ಅವಕಾಶ ನೀಡಿದರೆ ಹೆಮ್ಮೆಯಿಂದ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನೂತನ ಸಂಪುಟದಲ್ಲಿ ಯಾರು ಸಚಿವರಾಗಬೇಕು ಎಂದು ಹಿಂದೆ ಸಚಿವರಾದವರು ನಿರ್ಧಾರ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ನಮ್ಮ ಪಕ್ಷದ ಸರ್ವೋಚ್ಚ ನಾಯಕ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಮ್ಮ ಕೇಂದ್ರದ ಮುಖಂಡರು ಒಟ್ಟಾಗಿ ಕುಳಿತು ಅತ್ಯಂತ ಪಾರದರ್ಶಕವಾಗಿ ಉತ್ತಮ ಗುಣಮಟ್ಟದ ಸಚಿವ ಸಂಪುಟವನ್ನು ರಚಿಸಲಿದ್ದಾರೆ.
ಒಂದೂವರೆ ವರ್ಷದ ನಂತರ ಬಿಜೆಪಿ ಮತ್ತೆ ಬಹುಮತದಿಂದ ಅಧಿಕಾರಕ್ಕೆ ಬರಬೇಕಾದರೆ ಒಳ್ಳೆಯ ತಂಡ ಬೇಕು. ಹಾಗಾಗಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಉತ್ತಮವಾದ ತಂಡ ರಚಿಸಲಿದ್ದಾರೆ. ಯಾರು ಮಂತ್ರಿ ಆಗಬೇಕು ಎಂದು ಎಲ್ಲರೂ ಸೇರಿ ನಿರ್ಧರಿಸುತ್ತಾರೋ ಅವರು ಮಂತ್ರಿಯಾಗುತ್ತಾರೆ ಎಂದರು.
ನೂತನ ತಂಡದಲ್ಲಿ ಇರಬೇಕು ಎನ್ನುವ ನಿರೀಕ್ಷೆ ಎಲ್ಲರಿಗೂ ಇರುತ್ತದೆ. ಕರ್ನಾಟಕದಲ್ಲಿ ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಕರೆದು ಯಡಿಯೂರಪ್ಪ ಸಂಪುಟದಲ್ಲಿ ಅವಕಾಶ ಕೊಡಲಾಗಿತ್ತು. ನನ್ನ ಎರಡು ಇಲಾಖೆಯಲ್ಲಿ ಪಾರದರ್ಶಕ ಆಡಳಿತ ನೀಡಿ, ಭ್ರಷ್ಟಾಚಾರವನ್ನು ಶೂನ್ಯಕ್ಕೆ ಇಳಿಸಿದ್ದೇನೆ. ಆ ಹಿನ್ನೆಲೆಯಲ್ಲಿ ಪಕ್ಷ ನಿರ್ಧರಿಸಲಿದೆ. ನಮ್ಮ ನಾಯಕರು ನಿರ್ಧರಿಸಲಿದ್ದಾರೆ. ಮತ್ತೊಮ್ಮೆ ಸಂಪುಟಕ್ಕೆ ಬರಬೇಕು ಎಂದರೆ ಹೆಮ್ಮೆಯಿಂದ ಕೆಲಸ ಮಾಡುತ್ತೇನೆ ಎಂದು ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಂಪುಟ ರಚನೆ: ಸಿಎಂ ನಿರ್ಧಾರಕ್ಕೆ ಬದ್ಧ ಎಂದ ನಿರಾಣಿ