ಬೆಂಗಳೂರು: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಲೇಬೇಕು, ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತನಾಡಿ, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು ಅರಸು ಸಂಶೋಧನಾ ಪೀಠಕ್ಕೆ ಅನುದಾನ ನೀಡಲಾಗುತ್ತದೆ. ಬಲಾಢ್ಯ ಸಮುದಾಯಗಳೂ ಸಹ ಆರ್ಥಿಕವಾಗಿ ಹಿಂದುಳಿದಿರುವುದಾಗಿ ಅಹವಾಲನ್ನು ಕೊಡುತ್ತವೆ. ಆದರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ಭೂ ಸುಧಾರಣೆ ಯೋಜನೆಯ ಫಲಾನುಭವಿ ನಾನು, ಅವತ್ತು ನನಗೆ 2 ಎಕರೆ ಭೂಮಿ ಸಿಕ್ಕಿತ್ತು ಎಂದು ಸಚಿವ ಕೋಟ ಸ್ಮರಿಸಿಕೊಂಡರು.
'ಚುನಾವಣೆ ಮೀಸಲಾತಿಯಲ್ಲಿ ಅನ್ಯಾಯವಾಗುವುದಿಲ್ಲ'
ಅತಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ವಿಚಾರವಾಗಿ ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಕೆಲ ಸಮುದಾಯಗಳ ಬದುಕು ದಾರುಣ'
ಈಗಾಗಲೇ ಹಿಂದುಳಿದ ಆಯೋಗದ ಅಧ್ಯಕ್ಷರು ಹಲವು ಸಮುದಾಯಗಳ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದಾರೆ. ನಮ್ಮ ಸಮುದಾಯಗಳ ಬದುಕು ದಾರುಣವಾಗಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮೀಸಲಾತಿ ವಿಚಾರದಲ್ಲಿ ಮುಂದಿನ 15 ದಿನಗಳಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
'ವೀರಶೈವರು 2ಎ ಆದರೆ ಉಳಿದವರು ಆತ್ಮಹತ್ಯೆ'
ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ.ವೇಣುಗೋಪಾಲ ಮಾತನಾಡಿ, ಒಂದು ವೇಳೆ ವೀರಶೈವ ಲಿಂಗಾಯಿತದ ಉಪಜಾತಿಯಾದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಪಟ್ಟಿಗೆ ಸೇರಿಸಿದರೆ ಹಿಂದುಳಿದ ಸಮುದಾಯಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.