ಬೆಂಗಳೂರು: ಸಾಮೂಹಿಕವಾಗಿ ರಾಜೀನಾಮೆ ನೀಡಿದ ರೆಬೆಲ್ ಶಾಸಕರಿಗೂ, ನನಗೂ ಏನೂ ಸಂಬಂಧವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಿಶ್ವಾಸ ಮತ ನೂರಕ್ಕೆ ನೂರು ಪರ್ಸೆಂಟ್ ನಾವು ಗೆಲ್ಲುತ್ತೇವೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಕೊಟ್ಟಿದ್ರು. ಜೆಡಿಎಸ್ಗೆ 3ನೇ ಸ್ಥಾನ ಕೊಟ್ಟಿದ್ರು. ಥರ್ಡ್ ಪ್ಲೇಸ್ನವರು ಫಸ್ಟ್ ಪ್ಲೇಸ್ ಬಂದಿದ್ದು ದುರಂತ. ಈಗ ಆ ದುರಂತ ಹೋಗಿ ಒಳ್ಳೆ ದಿನಗಳು ಬಂದಿವೆ. ಮತ್ತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ವಿಧಾಸಭೆಯಲ್ಲಿ ಬಹುಮತವನ್ನು ಆರಾಮವಾಗಿ ನಾವು ತೋರಿಸುತ್ತೇವೆ, ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ರಾಜ್ಯದಲ್ಲಿ ಸುಭದ್ರ ರೀತಿಯ ಆಡಳಿತ ಕೊಡಬೇಕು. ನರೇಂದ್ರ ಮೋದಿಯವರಂತಹ ಆಡಳಿತ ರಾಜ್ಯದಲ್ಲೂ ನೀಡಬೇಕು. ಕರ್ನಾಟಕ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತ ಕಾಲ ಬಂದಿದೆ. ಏಕೆಂದರೆ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಹಾಗೇ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಈ ರೀತಿ ಬಂದು 30 ವರ್ಷಗಳೇ ಕಳೆದಿವೆ. ರಾಜ್ಯದ ಅಭಿವೃದ್ಧಿ ಯೋಜನೆಗಳು ಮತ್ತು ಕೇಂದ್ರದ ಹಣಕಾಸಿನ ನೆರವಿನಿಂದ ಅಭಿವೃದ್ಧಿ ಮಾಡುತ್ತೇವೆ ಎಂದರು.
ಇದೇ ವೇಳೆ 17ಜನ ಅತೃಪ್ತ ಶಾಸಕರನ್ನ ಅನರ್ಹಗೊಳಿಸಿದ ಸ್ಪೀಕರ್ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅಶೋಕ್, ಸ್ಪೀಕರ್ ನಡೆ ಏನಿದೆ ಅದು ಬಹಳ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದು ಒಳ್ಳೆಯದಲ್ಲ. ಏಕೆಂದರೆ ಅವರು ಕೂಡ ಶಾಸಕರಾಗಿದ್ದವರು. ಅವರು ಸ್ಪೀಕರ್ ಹುದ್ದೆಗೆ ಗೌರವ ಕೊಟ್ಟು ತೀರ್ಪು ನೀಡಬೇಕಿತ್ತು. ಹಿಂದೆ ಈ ರೀತಿಯ ತೀರ್ಪು ಬಂದಿಲ್ಲ.ಇದು ಒಂತರ ದ್ವೇಷದ ರಾಜಕಾರಣವಾಗಿದೆ. ಏಕೆ ಈ ರೀತಿ ಮಾಡಿದ್ರು ಅಂತ ಗೊತ್ತಿಲ್ಲ. ರಮೇಶ್ ಕುಮಾರ್ ಅವರು ಎಲ್ಲೋ ಎಡವಿ ಈ ರೀತಿ ತೀರ್ಪು ಕೊಟ್ಟಿದ್ದಾರೆ ಎಂದರು.