ಬೆಂಗಳೂರು: ಈ ಹಿಂದೆ ಒಟ್ಟು 1402 ಸಿಎ ನಿವೇಶನ ಹಂಚಿಕೆ ಮಾಡಲಾಗಿದೆ. ಆದರೆ ನಾನು ಮುಖ್ಯಮಂತ್ರಿ ಆದ ಬಳಿಕ ಒಂದೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನ ಪರಿಷತ್ನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಎಂ.ಸಿ.ವೇಣುಗೋಪಾಲ ಪ್ರಶ್ನೆಗೆ ಉತ್ತರ ನೀಡಿದ ಸಿಎಂ ಯಡಿಯೂರಪ್ಪ, ಒಟ್ಟು 1402 ಸಿಎ ನಿವೇಶನಗಳು ಹಂಚಿಕೆ ಆಗಿವೆ. ಆದರೆ ನಾನು ಅಧಿಕಾರಕ್ಕೆ ಬಂದ ನಂತರ ಒಂದೂ ಸಿಎ ನಿವೇಶನ ಹಂಚಿಕೆ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಸಿಎ ನಿವೇಷನ ಕುರಿತಂತೆ ತನಿಖೆ ಮಾಡಿಸಿ ನಿವೇಶನ ವಾಪಸ್ ಪಡೆಯಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಎರಡು ಕೋಟಿ ರೂಗೆ ಈಗಲೇ ಕ್ರಮ ಕೈಗೊಳ್ಳಬೇಕು. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಡುಗಿದರು.
ಸಿಎ ನಿವೇಶನ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ಎಂದು ಶ್ರೀಕಂಠೇಗೌಡರು ಹೇಳಿದಾಗ, ಖಂಡಿತಾ ಕ್ರಮ ತೆಗೆದುಕೊಂಡು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವುದೇ ಮುಲಾಜಿಲ್ಲ. ಜೊತೆಗೆ ಅಕ್ರಮ ಕಂಡು ಬಂದ ಸಿಎ ನಿವೇಶನಗಳ ಮುಟ್ಟುಗೋಲು ಹಾಕುವ ಜೊತೆಗೆ ಹರಾಜು ಹಾಕಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಹಾಕಾರಿ ಆಗುತ್ತದೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದರು.
ಸದಸ್ಯ ಶರಣಪ್ಪ ಮಟ್ಟೂರು ಕೆಆರ್ಇಡಿಎಲ್ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, 5 ಜನ ಉದ್ಯೋಗಿಗಳನ್ನು ಈಗಾಗಲೇ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಹೀಗಾಗಿ ನಾನು ಏನು ಮಾಡಲೂ ಬರುವುದಿಲ್ಲ. ಕಾಯಂಗೊಳಿಸುವ ವಿಚಾರ ಸಾಧ್ಯವಿಲ್ಲ. ಉಚ್ಚ ನ್ಯಾಯಾಲಯದಲ್ಲಿ ಅವರು ಚಾಲೆಂಜ್ ಮಾಡಬಹುದಿತ್ತು. ಯಾರೂ ನ್ಯಾಯಾಲಯದ ಮೊರೆ ಹೋಗಲಿಲ್ಲ. 15ರಲ್ಲಿ 8 ಮಂದಿ ಹೊರ ಗುತ್ತಿಗೆ ನೌಕರರು. 15 ಜನರನ್ನೂ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. 31 ಜನವರಿ 01, 2009 ರಲ್ಲೇ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದು, ಈಗ ಅವರನ್ನು ಕಾಯಂಗೊಳಿಸಲು ಅವಕಾಶವೇ ಇಲ್ಲ. ನನ್ನ ಚೌಕಟ್ಟಿನಲ್ಲಿ ಇವರಿಗೆ ಯಾವ ವಿಧದಲ್ಲಿ ನ್ಯಾಯ ಒದಗಿಸಲು ಸಾಧ್ಯವೋ ನೋಡೋಣ. ಎಲ್ಲರ ಜೊತೆ ಮಾತುಕತೆ ನಡೆಸುತ್ತೇನೆ. ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ. 2020 ಫೆ. 29ರ ಅಂತ್ಯಕ್ಕೆ ಬಿಡಿಎ ಅಡಿ ಒಟ್ಟು 409 ಅಧಿಕಾರಿ ಹಾಗೂ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿಯವರ ತೊಗರಿ ಖರೀದಿ ಸಂಬಂಧ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಉತ್ತರ ನೀಡಿ, ಇದೇ ತಿಂಗಳ 25, 26ರಂದು ದೆಹಲಿಗೆ ಹೋಗುತ್ತೇನೆ. ತೊಗರಿ ಖರೀದಿ ಸಂಬಂಧ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಆ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.