ಬೆಂಗಳೂರು: ಶ್ರೀಲಂಕಾದ ಮುಗ್ಧ ಪ್ರಜೆಗಳನ್ನು ಭಾರತಕ್ಕೆ ಕರೆತಂದು ಇಲ್ಲಿಂದ ವಿದೇಶಗಳಿಗೆ ಕಳ್ಳಸಾಗಣೆ ಮಾಡುವ ಜಾಲದ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ.
ಎನ್‌ಐಎ ಸ್ಪೆಷಲ್ ಕೋರ್ಟ್ ನೀಡಿರುವ ಜಾಮೀನು ರದ್ದು ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಎನ್‌ಐಎ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್ ಸಲ್ಲಿಸಿದ ಆಕ್ಷೇಪಣೆ ಪರಿಗಣಿಸಿದ ಪೀಠ, ಪ್ರತಿವಾದಿ ಆರೋಪಿಗಳಾದ ತಮಿಳುನಾಡಿನ ರಸೂಲ್ (24), ಸದ್ದಾಂ ಹುಸೇನ್ (24), ಅಬ್ದುಲ್ ಮಹೀತು (53) ಮತ್ತು ಸಾಕ್ರೆಟಿಸ್ (28) ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಆಕ್ಷೇಪಣೆ ವಿವರ...: ಶ್ರೀಲಂಕಾದ ಮುಗ್ಧ ಜನರನ್ನು ತಮಿಳುನಾಡು ಮೂಲಕ ಅಕ್ರಮವಾಗಿ ಭಾರತಕ್ಕೆ ಕರೆತಂದು ಇಲ್ಲಿಂದ ಕೆನಡಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ. ಇಲ್ಲಿಂದ ಸಾಗಣೆಯಾಗುವ ಪ್ರತಿ ಶ್ರೀಲಂಕಾ ಪ್ರಜೆಗೆ ತಲಾ 3 ರಿಂದ 10 ಲಕ್ಷವರೆಗೆ ಪಡೆಯಲಾಗುತ್ತಿದೆ. ಪ್ರಕರಣದ ಆರೋಪಿಗಳಿಗೆ ಶ್ರೀಲಂಕಾಕ್ಕೆ ಹೋಗಿ ಬರುವ ಸಮುದ್ರ ಮಾರ್ಗಗಳ ಪರಿಚಯ ಚೆನ್ನಾಗಿದ್ದು, ಜಾಮೀನು ನೀಡಿದರೆ ಅವರೆಲ್ಲ ಪರಾರಿಯಾಗುವ ಸಾಧ್ಯತೆಗಳಿವೆ ಎಂದು ಎನ್‌ಐಎ ಆಕ್ಷೇಪಣೆಯಲ್ಲಿ ವಿವರಿಸಿದೆ.
ಓದಿ: ಸೇತುವೆ ಮೇಲಿಂದ 50 ಅಡಿ ಕೆಳಗೆ ಬಿದ್ದ ಕಾರು.. ಶಾಸಕನ ಮಗ ಸೇರಿ ಏಳು ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು!
2021ರ ಜೂನ್ 10ರಂದುಈ ನಾಲ್ವರು ಆರೋಪಿಗಳನ್ನು ಮಾನವ ಕಳ್ಳಸಾಗಣೆ ಆರೋಪದಡಿ ಮಂಗಳೂರಿನಲ್ಲಿ ಬಂಧಿಸಲಾಗಿತ್ತು. ಇವರ ಜತೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ 13 ಆರೋಪಿಗಳು ಹಾಗೂ ಶ್ರೀಲಂಕಾದ 38 ಪ್ರಜೆಗಳನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ವಿದೇಶಿಯರ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿ ಎನ್‌ಐಎ ಪ್ರಕರಣ ದಾಖಲಿಸಿದೆ.