ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ ಜನರನ್ನು ಭಾವನಾತ್ಮಕವಾಗಿ ಮರುಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಮನೆ ಕಟ್ಟಿಕೊಡದಿದ್ದರೆ ನೇಣುಹಾಕಿಕೊಳ್ತೇನೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ. ಮತ್ತೊಂದು ಕಡೆ ಪಿಡಿಒಗಳ ಮೇಲೂ ಆಪಾದನೆ ಮಾಡಿದ್ದಾರೆ. ಹೀಗೆ ಜನರನ್ನ ಭಾವನಾತ್ಮಕವಾಗಿ ಕಟ್ಟಿಹಾಕ್ತಿದ್ದಾರೆ. ಆದರೆ ಅವರು ಹೇಳೋದೆಲ್ಲಾ ಬರೀ ಸುಳ್ಳು. ಈಗಾಗಲೇ 15 ಲಕ್ಷ ವಸತಿ ವಂಚಿತರಿಗೆ ಮನೆ ಕಟ್ಟಲಾಗಿದೆ. 7.65 ಲಕ್ಷ ಮನೆ ಪ್ರಗತಿಯಲ್ಲಿವೆ. ಆ ಮನೆಗಳಿಗೆ ಇನ್ನೂ ಬಾಕಿ ಹಣವನ್ನೇ ಬಿಡುಗಡೆ ಮಾಡಿಲ್ಲ. 2.5 ಲಕ್ಷ ಮನೆಗಳ ಅನುದಾನ ರದ್ದು ಮಾಡಿದ್ದಾರೆ. ಬಡವರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. 5.15 ಲಕ್ಷ ಮನೆಗಳ ಸರ್ವೆಗೆ ಮುಂದಾಗಿದ್ದಾರೆ ಎಂದು ದೂರಿದರು.
ಕಟ್ಟಿಕೊಳ್ತಿರೋ ಮನೆಗಳಿಗೆ ಹಣ ರಿಲೀಸ್ ಮಾಡಿಲ್ಲ. ಎರಡೂವರೆ ವರ್ಷದಿಂದ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಮನೆ ಒಡೆದು ಮನೆ ಕಟ್ಟೋಕೆ ಅಡಿಪಾಯ ಹಾಕಿದ್ದರೂ, ಗುಡಿಸಲಿನಲ್ಲಿದ್ದುಕೊಂಡು ಹೊಸ ಮನೆಯ ಕನಸು ಕಾಣ್ತಿದ್ದ ಬಡ ಫಲಾನುಭವಿಗಳು ಇನ್ನೂ ಪರದಾಡ್ತಿದ್ದಾರೆ. ಇದರ ಬಗ್ಗೆ ವಸತಿ ಸಚಿವರಿಗೆ ಕರುಣೆಯೇ ಇಲ್ಲ. ಆದರೆ ಭಾವನಾತ್ಮಕವಾಗಿ ಹೇಳಿಕೆಗಳನ್ನ ಕೊಡ್ತಿದ್ದಾರೆ. ವಸತಿ ಸಚಿವರು ಯಾರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಖಂಡ್ರೆ ಪ್ರಶ್ನಿಸಿದ್ದಾರೆ.
ಭ್ರಷ್ಟ ಅಧಿಕಾರಿ ಮಹದೇವ್ ಪ್ರಸಾದ್ ಮೇಲೆ ಆರೋಪಗಳಿವೆ. ಮತ್ತೆ ಆ ಅಧಿಕಾರಿಯನ್ನೇ ರಾಜೀವ್ ವಸತಿ ನಿಗಮಕ್ಕೆ ಕೂರಿಸಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯಿಂದ ಇನ್ನೇನು ಮಾಡೋಕೆ ಸಾಧ್ಯ. ಇವರಂತಹ ಅಧಿಕಾರಿಗಳಿಂದಲೇ ಮನೆ ನಿರ್ಮಾಣಕ್ಕೆ ಅಡ್ಡಿಯಾಗ್ತಿದೆ. ಸೂರಿಲ್ಲದವರಿಗೆ ಸೂರು ಕೊಡ್ತೇವೆ ಅಂತಾರೆ. 1 ಲಕ್ಷ ಮನೆ ಯೋಜನೆ ಏನಾಯ್ತು? ವಸತಿ ಯೋಜನೆಯನ್ನೇ ಹಳ್ಳ ಹಿಡಿಸಿದವರು ಅವರು. ಬಡ ಫಲಾನುಭವಿಗಳ ಕಣ್ಣಲ್ಲಿ ನೀರು ತರಿಸ್ತಿದ್ದಾರೆ. ಸೋಮಣ್ಣ ವಸತಿ ಇಲಾಖೆಯಿಂದ ತೊಲಗಿದ್ರೆ ಮಾತ್ರ ಆ ಇಲಾಖೆ ಉದ್ಧಾರವಾಗುತ್ತೆ ಎಂದ ಖಂಡ್ರೆ, ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಡ್ರಗ್ಸ್ ಆರೋಪದಲ್ಲಿ ಶಾಸಕ ಜಮೀರ್ ಹೆಸರು ಪ್ರಸ್ತಾಪಿಸಿ, ನಮ್ಮ ಶಾಸಕರೇ ತನಿಖೆ ಮಾಡಿ ಅಂದಿದ್ದಾರೆ. ಊಹಾಪೋಹದ ಆರೋಪ ಸರಿಯಲ್ಲ. ಯಾರೇ ಆಗಲಿ, ಅವರನ್ನ ಪತ್ತೆ ಹಚ್ಚಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಿ ಎಂದು ಈಶ್ವರ್ ಖಂಡ್ರೆ ಒತ್ತಾಯಿಸಿದರು.
ಸಚಿವ ಸಿ.ಟಿ. ರವಿಯವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೋ ಓಪನ್ ಮಾಡೋಕೆ ಹೊರಟಿದ್ದರು. ರಾಜ್ಯದಲ್ಲಿ ಕ್ಯಾಸಿನೋ ಪ್ರಾರಂಭಿಸೋಕೆ ಹೊರಟಿದ್ದೇಕೆ? ಇಂತವರಿಗೆ ಇದರ ಬಗ್ಗೆ ಮಾತನಾಡೋಕೆ ಹಕ್ಕಿದೆಯೇ? ಸಿ.ಟಿ. ರವಿ ಹೇಳೋದೊಂದು ಮಾಡೋದೊಂದು. ಅಕ್ರಮಗಳಿಗೆ ಪ್ರೋತ್ಸಾಹವನ್ನು ಕೊಡೋಕೆ ಪ್ರಯತ್ನ ಮಾಡ್ತಿದ್ದಾರೆ. ಜಮೀರ್ ಕ್ಯಾಸಿನೋ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಹೇಳಿದ್ರು.