ಬೆಂಗಳೂರು: ಕೊರೊನಾ ವೈರಸ್ ತಡೆಗೆ ಕಟ್ಟೆಚ್ಚರ ವಹಿಸಿರುವ ರಾಜ್ಯ ಸರ್ಕಾರ ವಿದೇಶದಿಂದ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಿದ್ದು, ಕೊರೊನಾ ವೈರಸ್ ದೃಢಪಟ್ಟವರ ಹಸ್ತದ ಹಿಂಭಾಗಕ್ಕೆ 'ಹೋಂ ಕ್ವಾರಂಟೈನ್' ಮುದ್ರೆ (ಸ್ಟ್ಯಾಂಪ್) ಹಾಕಲಾಗುತ್ತಿದೆ.
ಮುದ್ರೆಯು ಕೊರೊನಾ ವೈರಸ್ ಸೋಂಕು ಕಂಡುಬಂದವರ 14 ದಿನಗಳ 'ಹೋಂ ಕ್ವಾರಂಟೈನ್' ಅವಧಿಯ ಬಗ್ಗೆ ದಿನಾಂಕವನ್ನೊಳಗೊಂಡಿರುತ್ತದೆ. ಈ ಮುದ್ರೆಗೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಿದ ಖಚಿತತೆಗಾಗಿ ಬಳಸುವ ಶಾಯಿಯನ್ನು ಉಪಯೋಗಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬರುವ ಪ್ರಯಾಣಿಕರನ್ನು ನೇರವಾಗಿ ಬಸ್ನಲ್ಲಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 15 ಕೊರೊನಾ ಪ್ರಕರಣ ಕಂಡುಬಂದ ಹಿನ್ನೆಲೆ, ಮತ್ತಷ್ಟು ಕಟ್ಟೆಚ್ಚರ ವಹಿಸಿರುವ ಸರ್ಕಾರದಿಂದ ಸೋಂಕು ಕಂಡುಬಂದಲ್ಲಿ 'ಹೋಂ ಕ್ವಾರಂಟೈನ್' ಮುದ್ರೆ ಹಾಕುವ ಕಾರ್ಯ ನಡೆಯುತ್ತಿದೆ.