ಬೆಂಗಳೂರು: ನಗರದಲ್ಲಿ ಕೋವಿಡ್ ಉಲ್ಬಣಗೊಂಡು ಸಂಪೂರ್ಣ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಎದುರಾದರೆ, ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆ 30 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಂದು ಪಾದಯಾತ್ರೆ ನಡೆಯುತ್ತಿದ್ದು, ರಾಮನಗರ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಅದಕ್ಕೆ ಕಾರಣಕರ್ತರು ಯಾರು ಅವರ ವಿರುದ್ಧ ಮೊದಲು, ನಂತರ ಉಳಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದಂಡ ಹಾಕುವ ಪ್ರಕ್ರಿಯೆಯಲ್ಲಿ ಸರ್ಕಾರದ ವಿಳಂಬ ಇಲ್ಲ. ಇಂದು ಅವರು ಮಾಡಬೇಕಾದ್ದು ಪಾದಯಾತ್ರೆ ಅಲ್ಲ. ನೀರಿನಲ್ಲಿ ಕಿವಿ ಹಿಡಿದು ಕುಳಿತು ಜನರಲ್ಲಿ ದಮ್ಮಯ್ಯ ತಪ್ಪಾಯ್ತು ಅಂತಾ ಕ್ಷಮೆ ಕೇಳಬೇಕು. ಕೊರೊನಾ ಸಂದರ್ಭದಲ್ಲಿ ಇವರು ಈ ರೀತಿ ಮಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಅಸಹಾಯಕರಲ್ಲ
ಡಿ.ಕೆ ಶಿವಕುಮಾರ್ ಹೇಳಿದರು, ನಮಗೆ ಅನುಮತಿ ಬೇಕಿಲ್ಲ ಅಂತಾ. ಅವರು ಹೀಗೆ ಮಾಡಬಾರದಿತ್ತು. ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ. ಒಂದು ರಾಜಕೀಯ ಪಕ್ಷ, ಪಾದಯಾತ್ರೆ ಮಾಡುತ್ತೇವೆ ಎಂದು ಹೊರಟರೆ, ಪೊಲೀಸ್ ಫೋರ್ಸ್ ಇದೆ. ತಡೆ ಹಾಕಲು ಆಗೋದೇ ಇಲ್ಲ ಅಂತಲ್ಲ. ಅದು ಮತ್ತೊಂದು ಘಟನೆಗೆ ಕಾರಣ ಆಗಬಾರದು. ಜನರು ಕೂಡ ಕರೆ ಮಾಡ್ತಿದ್ದಾರೆ. ಹೀಗೇ ಮಾಡಬಾರದು ಅಂತಾ ಅವರಿಗೆ ಅರಿವಾಗುತ್ತೆ ಎಂದು ಎದುಕೊಂಡಿದ್ದೆವು ಎಂದು ತಿಳಿಸಿದರು.
ಬೆಂಗಳೂರಲ್ಲಿ ಕೋವಿಡ್ ಉಲ್ಬಣ
ಬೆಂಗಳೂರು ಬರುವಾಗ ತಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ 10 ಸಾವಿರ ಕೇಸ್ ಬರುತ್ತಿದೆ. ಶ್ರಮಿಕ ವರ್ಗ ಬಹಳಷ್ಟು ಕಷ್ಟಪಡುತ್ತಿದ್ದಾರೆ. ಅವರನ್ನು ತಡೆಯೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಕೊರೊನಾ ಪ್ರಕರಣ ವರದಿ ಫೇಕ್ ಅಂತಾ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರು ಹೇಳಲಿ. ಸೋಂಕು ಮತ್ತೆ ಉಲ್ಬಣ ಆದ್ರೆ ಕಾಂಗ್ರೆಸ್ ಪಕ್ಷದವರೇ ಕಾರಣ.
ಬೆಂಗಳೂರು ಒಳಗಿನಲ್ಲಿ ಏನು ಮಾಡಬೇಕು ಅನ್ನೋದು ನೋಡ್ತೀವಿ. ಡಿ.ಕೆ ಶಿವಕುಮಾರ್ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಇವರ ಜೀವ ಮುಖ್ಯ, ಆರೋಗ್ಯ ಮುಖ್ಯ. ಟೆಸ್ಟ್ ಮಾಡಲು ಹೋದರೆ, ಗದರಿಸಿ ಕಳುಹಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜ್ವರ ಬಂದಿದೆ. ಯಾವ ರೀತಿಯ ಜ್ವರ ಅಂತ ಗೊತ್ತಿಲ್ಲ. ಆರೋಗ್ಯವಾಗಿ ಇರಲಿ ಅನ್ನೋದೇ ನಮ್ಮ ಉದ್ದೇಶ ಎಂದರು.
ಸಚಿವರ ಪುತ್ರನ ಬ್ಲಾಕ್ ಮೇಲ್ ಪ್ರಕರಣ ವಿಚರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಮಂತ್ರಿ ಸೋಮಶೇಖರ್ ಅವರ ಮಗನಿಗೆ ಮೇಲೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಒಬ್ಬರನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಯಾವ ಒತ್ತಡಕ್ಕೂ ಮಣಿಯಲ್ಲ. ಯಾರೇ ಪ್ರಭಾವಿಗಳಿದ್ರೂ, ಅವರನ್ನ ಬಿಡುವ ಪ್ರಶ್ನಿಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗೃಹ ಸಚಿವ ಆರಗ ಅಜ್ಞಾನದ ಜ್ಞಾನೇಂದ್ರರಾಗಿದ್ದಾರೆ: ಡಿಕೆ ಶಿವಕುಮಾರ್ ಟೀಕಾಪ್ರಹಾರ