ಕೇಂದ್ರ ಬಜೆಟ್ -2025; ನಿರ್ಮಲಾ ಸೀತಾರಾಮನ್ ಲೆಕ್ಕಾಚಾರದ ಮೇಲೆ ಮಲೆನಾಡಿಗರ ನಿರೀಕ್ಷೆಗಳೇನು? - UNION BUDGET 2025
ಚುನಾವಣೆ ನಂತರ ನಡೆಯುತ್ತಿರುವ ಮೊದಲ ಬಜೆಟ್ ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ, ರಾಷ್ಟ್ರೀಯ ಹೆದ್ದಾರಿ ಯೋಜನೆ, ರೈಲ್ವೆ ಯೋಜನೆಗಳಿಗೆ ಯಾವ ರೀತಿ ಕೊಡುಗೆಗಳನ್ನು ನೀಡಲಿದೆ ಎಂದು ಮಲೆನಾಡಿನ ಜನ ಎದುರು ನೋಡುತ್ತಿದ್ದಾರೆ.


Published : Jan 30, 2025, 3:46 PM IST
|Updated : Jan 30, 2025, 7:02 PM IST
ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಫೆಬ್ರವರಿ 1 ರಂದು ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಎನ್ಡಿಎ ಸರ್ಕಾರದ 11ನೇ ಬಜೆಟ್ ಆಗಿದೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಮಂಡನೆ ಆಗಲಿರುವ ಮೊದಲ ಬಜೆಟ್ ಇದಾಗಿದೆ. ಚುನಾವಣೆಯ ನಂತರ ನಡೆಯುತ್ತಿರುವ ಬಜೆಟ್ ಮೇಲೆ ದೇಶದ ಜನರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಈ ಬಾರಿ ತೆರಿಗೆ ವಿನಾಯಿತಿ, ಜಿಎಸ್ಟಿಯನ್ನು ಕಡಿಮೆ ಮಾಡುವುದು ಸೇರಿದಂತೆ ಇನ್ನಿತರೆ ಯೋಜನೆಗಳತ್ತ ದೇಶದ ಜನ ಎದುರು ನೋಡುತ್ತಿದ್ದಾರೆ. ಸಬ್ಸಿಡಿ ನೀಡುವುದು ಸೇರಿದಂತೆ ಉದ್ಯಮಗಳಿಗೆ ಅನುಕೂಲವಾಗುವ ವಿಷಯಗಳು ಪ್ರಸ್ತಾಪವಾಗುತ್ತವೆಯೇ, ದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಅನೇಕ ವಿಷಯಗಳಿಗೆ ಬಜೆಟ್ ಅನುಕೂಲವಾಗಲಿದೆಯೇ ಎಂಬುದನ್ನು ನೋಡಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ.
- ತಾಳಗುಪ್ಪ- ಶಿರಸಿ ರೈಲು ಮಾರ್ಗ ವಿಸ್ತರಣೆಗೆ ಅನುಮೋದನೆ ಸಿಗುವ ನಿರೀಕ್ಷೆ
- ಆಮೆಗತಿಯಲ್ಲಿ ಸಾಗುತ್ತಿರುವ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ ವೇಗ ಪಡೆಯಬೇಕಿದೆ
- ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ಘೋಷಣೆ
- ವಿಐಎಸ್ಎಲ್ ಕಾರ್ಖನೆಯ ಪುನಾರಂಭಕ್ಕೆ ಹಣಕಾಸು ನೆರವು ಸೇರಿದಂತೆ ಹಲವು ನಿರೀಕ್ಷೆ
ಕೇಂದ್ರ ಬಜೆಟ್ನ ನಿರೀಕ್ಷೆ ಕುರಿತು ಶಿವಮೊಗ್ಗದ ನಾಗರಿಕ ವಸಂತ ಹೋಬಳಿದಾರ್ ಮಾತನಾಡಿ, "ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ತಲುಪುವ ಅವಧಿಯನ್ನು ಕಡಿಮೆ ಮಾಡಬೇಕಿದೆ. ಅಲ್ಲದೆ ಜಿಲ್ಲೆಯಲ್ಲಿ ಇರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಬೇಕಿದೆ. ಪ್ರವಾಸಿ ತಾಣಗಳಿಗೆ ಜನ ಭೇಟಿ ನೀಡುವುದರಿಂದ ಜಿಲ್ಲೆಯಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಶಿವಮೊಗ್ಗ ಜಿಲ್ಲೆ ಪ್ರವಾಸೋದ್ಯಮಕ್ಕೆ ಬಹಳ ಒಳ್ಳೆಯ ಜಿಲ್ಲೆ ಆಗಿದೆ. ಇದುವರೆಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತಮ ಬೆಳವಣಿಗೆ ಕಂಡಿಲ್ಲ. ಪ್ರವಾಸೋದ್ಯಮಕ್ಕೆ ಬೇಕಾದ ವಾತಾವರಣವನ್ನು ಇನ್ನೂ ಜಿಲ್ಲೆಯಲ್ಲಿ ಬೆಳೆಸಿಲ್ಲ. ವಿಮಾನ ಸೇವೆ ಸೀಮಿತ ಸ್ಥಳಗಳಿಗೆ ಮಾತ್ರ ಇದೆ. ಮುಖ್ಯವಾಗಿ ಮುಂಬೈ, ದೆಹಲಿ ಸೇರಿದಂತೆ ಇತರೆ ಭಾಗಗಳಿಗೆ ವಿಮಾನಯಾನ ಸೇವೆ ಲಭ್ಯವಾಗಬೇಕಿದೆ. ರೈಲು ಸೇವೆಯಲ್ಲಿ ಮುಂಬೈಗೆ ಸಂಪರ್ಕ ಕಲ್ಪಿಸಿ, ಕೊಂಕಣ ರೈಲ್ವೆಗೆ ಸೇರ್ಪಡೆ ಮಾಡಬೇಕು. ಬಿರೂರಿನಿಂದ ಶಿವಮೊಗ್ಗ ಲೈನ್ ಡಬಲಿಂಗ್ ಆಗಬೇಕು" ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ವಿಜಯ ಕುಮಾರ್ ಮಾತನಾಡಿ, "ಕೇಂದ್ರ ಬಜೆಟ್ ಮೇಲೆ ಜಿಲ್ಲೆಯ ಜನತೆಗೆ ಹಲವಾರು ನಿರೀಕ್ಷೆಗಳಿವೆ. ನಮ್ಮ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆ ಹಾಗೂ ಎಂಎಸ್ಎಂಇಗೆ ಅನುಕೂಲಕರವಾದ ಕೈಗಾರಿಕೆಗಳು ಬರಬೇಕಿದೆ. ಅಲ್ಲದೆ ಜಿಲ್ಲೆಗೆ ಫುಡ್ ಪಾರ್ಕ್ ಆಗಬೇಕಿದೆ. ಇದಲ್ಲದೆ ಜಿಲ್ಲೆಗೆ ಮೆಕ್ಕೆಜೋಳ ಸಂಶೋಧನಾ ಕೇಂದ್ರ ಮಂಜೂರಾಗಿದ್ದು, ಘೋಷಣೆ ತುಂಬ ವಿಳಂಬವಾಗುತ್ತಿದೆ. ಕೊಂಕಣ ರೈಲು ಸಂಪರ್ಕಕ್ಕೆ ಸರ್ವೇಗೆ ಆದೇಶವಾಗಿದೆ. ಇದನ್ನು ಬೇಗ ಮುಗಿಸಿ, ಕಾಮಗಾರಿ ಪ್ರಾರಂಭ ಮಾಡಬೇಕಿದೆ. ಅಲ್ಲದೆ ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದನ್ನು ವೇಗವಾಗಿ ಮುಗಿಸಬೇಕಿದೆ. ಬಹಳ ಮುಖ್ಯವಾಗಿ ದೇವಕಾತಿ ಕೂಪ್ಪದ ಕೈಗಾರಿಕಾ ವಸಾಹತು ಪ್ರದೇಶ ಅಭಿವೃದ್ಧಿಗೆ ಬಜೆಟ್ನಲ್ಲಿ ಅನುಕೂಲವಾಗುವ ನಿರೀಕ್ಷೆ ಇದೆ. ಬಹಳ ಹಿಂದಿನಿಂದಲೂ ಶಿವಮೊಗ್ಗ ಜಿಲ್ಲೆಗೆ ಟ್ರಕ್ ಟರ್ಮಿನಲ್ ಆಗಬೇಕೆಂಬ ಬೇಡಿಕೆ ಇದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಹಾಗೂ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ಗೆ ಬೇಗನೇ ಅವಕಾಶ ಮಾಡಿಕೊಡಬೇಕಿದೆ" ಎಂದು ಹೇಳಿದರು.
"ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಮೇಲೆ ಡೈರೆಟ್ ಟ್ಯಾಕ್ಸ್ ಕೋಡ್ ಅನ್ನು ಜಾರಿಗೊಳಿಸಿ, 1961ರ ತೆರಿಗೆ ನೀತಿಯಲ್ಲಿ ಅಮೂಲಾಗ್ರವಾದ ಬದಲಾವಣೆ ತರುವ ನೀರಿಕ್ಷೆ ಇದೆ. ಆದಾಯ ತೆರಿಗೆಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡುವ ನಿರೀಕ್ಷೆ ಇದೆ. ಆದಾಯ ತೆರಿಗೆ ವಿನಾಯಿತಿಯನ್ನು 1.50 ಲಕ್ಷದಿಂದ 2 ಲಕ್ಷಕ್ಕೆ ಏರಿಸುವ ನಿರೀಕ್ಷೆ ಇದೆ. ಆದಾಯ ತೆರಿಗೆಯ ಸರ್ಚಾರ್ಜ್ ಅನ್ನು ಶೇ. 37ರಿಂದ ಶೇ. 25ಕ್ಕೆ ಇಳಿಸುವ ನೀರಿಕ್ಷೆ ಇದೆ. ಆದಾಯ ತೆರಿಗೆಯ ಡಿಬೇಟ್ ಹೌಸಿಂಗ್ ಲೋನ್ ಅನ್ನು 2 ರಿಂದ 3 ಲಕ್ಷಕ್ಕೆ ಏರಿಸುವ ನಿರೀಕ್ಷೆ ಇದೆ. ಜಿಎಸ್ಟಿ ವೇವರ್ಸ್ ಸ್ಕೀಂ ಅನ್ನು 2020-21ಕ್ಕೆ ಅನ್ವಯ ಆಗುವ ರೀತಿ ಜಾರಿ ಮಾಡಬೇಕಿದೆ ಎಂಬ ಬೇಡಿಕೆ ಇದೆ. ಆಟೋ ಮೊಬೈಲ್, ಎಲೆಕ್ಟ್ರಿಕಲ್ ವಹಿಕಲ್ ಸೇರಿ ಇತರೆ ಕಡೆ ಜಿಎಸ್ಟಿಯಲ್ಲಿ ಅಮೂಲಾಗ್ರವಾದ ಬದಲಾವಣೆ ತರುವ ನಿರೀಕ್ಷೆ ಇದೆ ಎಂದು ಶಿವಮೊಗ್ಗದ ತೆರಿಗೆ ಸಲಹೆಗಾರ ಆರ್. ಮನೋಹರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಹುಬ್ಬಳ್ಳಿ-ಧಾರವಾಡ ಮಂದಿಗಿದೆ ಬೆಟ್ಟದಷ್ಟು ನಿರೀಕ್ಷೆ: ಭರವಸೆ ಬಿಡದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ