ಬೆಂಗಳೂರು: '2022 ಜೆಡಿಎಸ್ನ ಸಂಘಟನಾ ವರ್ಷ' ಎಂದು ಘೋಷಿಸಿರುವ ಜೆಡಿಎಸ್, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು 'ಜನತಾ- ಜಲಧಾರೆ' ಯಾತ್ರೆಯನ್ನು 180 ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಜನತಾ ಜಲಧಾರೆಗೆ ಹೊರಡಲಿರುವ ಗಂಗಾ ರಥವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹೆಚ್ಡಿಕೆ, ಜಲಧಾರೆ ಯಾತ್ರೆ ಮೂಲಕ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಾಗೂ ಇತರ ರಾಜ್ಯಗಳು ಮಾಡಿದ ಅನ್ಯಾಯ ಹಾಗೂ ಕಿರುಕುಳದ ಬಗ್ಗೆ ರಾಜ್ಯದ ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಕಳೆದ 75 ವರ್ಷಗಳಲ್ಲಿ ಹಲವಾರು ನದಿಗಳು ರಾಜ್ಯದಲ್ಲಿ ಹುಟ್ಟಿ ಹರಿಯುತ್ತಿವೆ. ಕೇಂದ್ರ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮನ್ನು ನಿರ್ಲಕ್ಷಿಸಿವೆ. ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯ ಹೆಚ್ಚು ಎಂದರು.
ರಾಜ್ಯದ ಎಲ್ಲಾ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಮಹಾ ಸಂಕಲ್ಪದೊಂದಿಗೆ ಜೆಡಿಎಸ್ ಪಕ್ಷದಿಂದ ರಾಜ್ಯವ್ಯಾಪಿ ಇದೇ ಜನವರಿ 26ರಿಂದ 'ಜನತಾ ಜಲಧಾರೆ' ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕರ್ನಾಟಕ ಅತಿವೃಷ್ಟಿ- ಅನಾವೃಷ್ಟಿಗೆ ತುತ್ತಾಗುವ ರಾಜ್ಯ. ಇದು ಪ್ರತೀ ವರ್ಷ ಕಥೆ. ಅಗಾಧವಾಗಿ ಸುರಿಯುವ ಮಳೆ ನೀರನ್ನು ಪೋಲಾಗದಂತೆ ಬಳಕೆ ಮಾಡಿಕೊಳ್ಳುವುದು ಹಾಗೂ ವರುಣನ ಕೃಪೆ ಇಲ್ಲದೆ ಸದಾ ಬರದಿಂದ ತತ್ತರಿಸುವ ಬಯಲುಸೀಮೆಯನ್ನು ಜಲಶ್ಯಾಮಲಗೊಳಿಸುವ ಕನಸು ನಮ್ಮದು. ಗಂಗೆಯನ್ನು ಪರಮ ಪವಿತ್ರವೆಂದು ಭಾವಿಸುವ ಪರಂಪರೆ ನಮ್ಮದು. ಈ ನಂಬಿಕೆಗೆ ಚ್ಯುತಿ ಬಾರದಂತೆ ಶ್ರದ್ಧಾ ಭಕ್ತಿಯಿಂದ ರಾಜ್ಯದ 15 ನದಿಗಳ ಪವಿತ್ರ ಜಲವನ್ನು ಕಲಶಗಳಲ್ಲಿ ಸಂಗ್ರಹ ಮಾಡಿ, ಆ ನೀರನ್ನು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಬರಮಾಡಿಕೊಂಡು ಗಂಗಾಪೂಜೆ ನೆರವೇರಿಸುವುದು ಎಂದು ಹೇಳಿದರು.
ಜ.23ಕ್ಕೆ ಗಂಗಾ ರಥಗಳಿಗೆ ಹಸಿರು ನಿಶಾನೆ: ಜನವರಿ 23ರಂದು ರಾಮನಗರದ ಚಾಮುಂಡೇಶ್ವರಿ ಅಮ್ಮನವರ ದೇಗುಲದಿಂದ ರಾಜ್ಯದ 15 ದಿಕ್ಕುಗಳಿಗೆ ಹೊರಡುವ ಗಂಗಾ ರಥಗಳಿಗೆ (15 ವಾಹನಗಳು) ನಾನು, ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಚಾಲನೆ ನೀಡುವರು ಎಂದರು.
ಜ.26ರಿಂದ ಜಲಧಾರೆ ಆರಂಭ: ಜನವರಿ 26ರಂದು ಇಷ್ಟೂ ವಾಹನಗಳಲ್ಲಿ ಅಳವಡಿಸಲಾಗಿರುವ ಕಲಶಗಳ ಮೂಲಕ ಪೂರ್ವ ನಿಗದಿ ಮಾಡಲಾಗಿರುವ ಸ್ಥಳಗಳಲ್ಲಿ ಕಾವೇರಿ, ಕಬಿನಿ, ಮೇಕೆದಾಟು, ಹೇಮಾವತಿ, ನೇತ್ರಾವತಿ, ಕುಮಾರಧಾರ, ತುಂಗಭದ್ರಾ, ಶರಾವತಿ, ಅಘನಾಶಿನಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಅರ್ಕಾವತಿ, ಉತ್ತರ ಪಿನಾಕಿನಿ, ಚಿತ್ರಾವತಿ ಸೇರಿ 15 ಸ್ಥಳಗಳಲ್ಲಿ ಮೊದಲ ದಿನ ಜಲ ಸಂಗ್ರಹ ಮಾಡಲಾಗುವುದು.
ಒಟ್ಟು 51 ಕಡೆ ಜಲ ಸಂಗ್ರಹ: ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 51 ಸ್ಥಳಗಳಲ್ಲಿ ಪವಿತ್ರ ನದಿಗಳ ಜಲ ಸಂಗ್ರಹ ಮಾಡಲಾಗುವುದು. ರಾಜ್ಯದ 180 ವಿಧಾನಸಭೆ ಕ್ಷೇತ್ರಗಳು, 140 ತಾಲ್ಲೂಕು ಕೇಂದ್ರಗಳಲ್ಲಿ ಈ ಕಲಶಗಳು ಹಾದು ಹೋಗಲಿದ್ದು, ಎಲ್ಲೆಡೆ ಜಲ ತುಂಬಿದ ಕಲಶಗಳ ಮೆರೆವಣಿಗೆ, ಕಲಾ ತಂಡಗಳ ಮೆರಗು, ಮಂಗಳವಾದ್ಯಗಳ ಮೇಳ, ಕಲಶಗಳೊಂದಿಗೆ ಮಹಿಳೆಯರ ನಡಿಗೆ ನಡೆಯಲಿದೆ. ದಿನಂಪ್ರತಿ 15 ಕಡೆ ಇಂಥ ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ: ರಾಜ್ಯದ ಉದ್ದಗಲಕ್ಕೂ ಸಾಗಿ ಬರುವ ಈ ಹದಿನೈದೂ ವಾಹನಗಳು 15-20 ದಿನಗಳ ಒಳಗಾಗಿ ಬೆಂಗಳೂರು ತಲುಪುತ್ತವೆ. ಅಂದು ಇಡೀ ಬೆಂಗಳೂರನ್ನು ಪ್ರದಕ್ಷಿಣೆ ಹಾಕುವ ಇಷ್ಟೂ ವಾಹನಗಳು ಅದೇ ದಿನ ಸಂಜೆ ಅರಮನೆ ಮೈದಾನದಲ್ಲಿ ಸೇರಲಿವೆ. ಆ ನಂತರ ಎರಡು ದಿನಗಳಲ್ಲಿ ಒಂದು ಬೃಹತ್ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಉದ್ದಗಲಕ್ಕೂ ಸಂಗ್ರಹಿಸಲಾದ ಜಲವನ್ನು ದೊಡ್ಡ ಕಲಶಕ್ಕೆ ತುಂಬಿಸಿ ಗಂಗಾ ಪೂಜೆ, ಗಂಗಾ ಆರತಿ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ಆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು, ನಾಡಿನ ಧರ್ಮಗುರುಗಳು, ಗುರು ಹಿರಿಯರು ಸೇರಿ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ವರ್ಷವಿಡೀ ಗಂಗಾ ಪೂಜೆ: ಆ ಕಾರ್ಯಕ್ರಮ ಮುಗಿದ ನಂತರ ಪೂಜಿಸಲ್ಪಟ್ಟಿದ್ದ ಪವಿತ್ರ ಜಲವುಳ್ಳ ಕಲಶವನ್ನು ಬೆಂಗಳೂರಿನ ವಿವಿಧೆಡೆಗಳಿಂದ ಮೆರವಣಿಗೆ ಮೂಲಕ ಪಕ್ಷದ ರಾಜ್ಯ ಕಚೇರಿ ಜೆಪಿ ಭವನಕ್ಕೆ ವಿದ್ಯುಕ್ತವಾಗಿ ಬರ ಮಾಡಿಕೊಂಡು ಆ ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ಅಂದಿನಿಂದ ಮುಂದಿನ 391 ದಿನಗಳ ಕಾಲ ಗಂಗಾ ಪೂಜೆ, ಗಂಗಾ ಆರತಿ ನಿರಂತರವಾಗಿ ನಡೆಯಲಿದೆ. ಆ ನಿತ್ಯ ಪೂಜೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತೇವೆ: ನಮಗೆ ಧಾವಂತವಿಲ್ಲ. ವೈರಸ್ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡುವ ಎಲ್ಲಾ ನಿಯಮಗಳಿಗೆ ಬದ್ಧರಾಗಿ ಜಲಧಾರೆ ಕಾರ್ಯಕ್ರಮ ನಡೆಸುತ್ತೇವೆ. ಕಾಂಗ್ರೆಸ್ ನಾಯಕರಂತೆ ಅನುಮತಿ ಕೊಡದಿದ್ದರೆ ಪ್ರಾಣ ಬಿಡುತ್ತೇವೆ ಎಂದು ನಾವು ಬೆದರಿಕೆ ಹಾಕುವುದಿಲ್ಲ ಎಂದರು ಕುಮಾರಸ್ವಾಮಿ.
ರಾಜ್ಯಕ್ಕೆ ನಿರಂತರ ಅನ್ಯಾಯ: ನೀರಿನ ಬಗ್ಗೆ ಇಡೀ ದೇಶದಲ್ಲೇ ಅತ್ಯಂತ ಕಿರುಕುಳಕ್ಕೆ ಒಳಗಾದ, ಅಷ್ಟೇ ಅನ್ಯಾಯಕ್ಕೆ ಒಳಗಾದ ರಾಜ್ಯ ಕರ್ನಾಟಕ. ಒಕ್ಕೂಟ ವ್ಯವಸ್ಥೆಯಲ್ಲೇ ಇದ್ದರೂ ಭಾಷೆ, ನೆಲ, ಜಲ, ಅಭಿವೃದ್ಧಿ, ಅನುದಾನ; ಇತ್ಯಾದಿಗಳಲ್ಲಿ ಇನ್ನಿಲ್ಲದ ಅವಗಣನೆಗೆ ಒಳಗಾದ ರಾಜ್ಯವೂ ಕರ್ನಾಟಕವೇ ಎಂದು ಮಾಜಿ ಸಿಎಂ ಹೇಳಿದರು.
ದಕ್ಷಿಣದ ಇತರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಪ್ರಾದೇಶಿಕ ಶಕ್ತಿಗಳಿಗೆ ಜನರು ಉತ್ತೇಜನ ನೀಡಲಿಲ್ಲ. ಸದಾ ಕಾಲ ರಾಷ್ಟ್ರೀಯ ಪಕ್ಷಗಳೆಂಬ ಮಾಯಾಜಿಂಕೆಗಳನ್ನು ಬೆನ್ಹತ್ತಿದ ಪರಿಣಾಮ ಇಂದಿಗೂ ನಾವು ನೀರಿಗಾಗಿ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಜತೆ ಗುದ್ದಾಡುತ್ತಿದ್ದೇವೆ. ಈಗ ಮೇಕೆದಾಟು ಯೋಜನೆ ಆ ಒದ್ದಾಟದ ಹೊಸ ಹೆಸರು ಎಂದು ಅವರು ಟಾಂಗ್ ನೀಡಿದರು.
ಕಾಂಗ್ರೆಸ್ ಪಾದಯಾತ್ರೆಗೆ ಕೌಂಟರ್ ಅಲ್ಲ: ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ಮಾಡುತ್ತಿರುವುದಕ್ಕೆ ಜಲಧಾರೆ ಯಾತ್ರೆ ಕೌಂಟರ್ ಅಲ್ಲ ಎಂದು ಸ್ಪಷ್ಟಪಡಿಸಿದ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಆಗಬೇಕಿರುವ ಪ್ರಮುಖ ನೀರಾವರಿ ಯೋಜನೆಗಳು, ಆ ಯೋಜನೆಗಳ ಅನುಷ್ಠಾನಕ್ಕೆ ತರುವ ಸಂಬಂಧ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನಿ ಜೊತೆ ದೇವೇಗೌಡರು ವಿಶ್ವಾಸ ದಲ್ಲಿ ಇದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಹೇಳಬಹುದೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಆ ವಿಶ್ವಾಸ ಇದ್ದರೆ ನೀವು ದೇವೇಗೌಡರಿಗೆ ಹೇಳಬಹುದಲ್ಲಾ?. ನಾವು ಭಯಬಿದ್ದು ಹೇಳುತ್ತಿಲ್ಲ. ಪಾದಯಾತ್ರೆಯಿಂದ ಈ ಭಾಗದ ಜನರ ಮೇಲೆ ಎಫೆಕ್ಟ್ ಆಗುತ್ತದೆ. ಕಾಂಗ್ರೆಸ್ ನಾಯಕರೇನೊ ಏಸಿಯಲ್ಲಿ ಇರುತ್ತಾರೆ. ಆದರೆ ಸ್ಲಂ ನಲ್ಲಿ ಇರುವವರ ಕಥೆ ಹೇಳಿ.
ದೇವೇಗೌಡರು ಉಪವಾಸ ಕೂತಾಗ ಕೇಂದ್ರದ ಮಂತ್ರಿ ಬಂದರು. ದೇವೇಗೌಡರ ಹೋರಾಟವೇ ನೀರಾವರಿ ಯೋಜನೆಗಳು. ದೇವೇಗೌಡರು ಹೋರಾಟದ ಫಲವೇ ಹೇಮಾವತಿ, ಹಾರಂಗಿ, ಕಬಿನಿ ಯೋಜನೆಗಳು. ಕೃಷ್ಣ ಮೇಲ್ದಂಡೆ ಯೋಜನೆಗೆ ಕೊಟ್ಟ ಕೊಡುಗೆ. ಇವೆಲ್ಲವನ್ನೂ ಸಿದ್ದರಾಮಯ್ಯ ಅವರು ನೆನಪು ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗೆ ಇಲ್ಲ. ನಿಮ್ಮ ಪಟಾಲಾಂ ಬೆಂಗಳೂರಿನಲ್ಲಿ ಎಷ್ಟು ಕೆರೆ ನುಂಗಿದ್ದಾರೆ. ಆ ಕೆರೆಗಳು ಉಳಿದಿದ್ದರೆ ಎಷ್ಟು ಅನುಕೂಲ ಆಗುತಿತ್ತು. ಕೆರೆ ನುಂಗಿ ನೀರು ಕುಡಿದವರು ನೀವು. ಕಾವೇರಿ ಉಳಿಸ್ತೀರಾ..? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಜನತಾ ಜಲಧಾರೆಯ ಲಾಂಛನ ಬಿಡುಗಡೆ ಮಾಡಿದರು.