ಬೆಂಗಳೂರು: "ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲದಲ್ಲಿ ನಡೆದ ಸಾಲ ಮನ್ನಾದಲ್ಲಿ ಅವ್ಯವಹಾರವಾಗಿದೆ. ಕೆಲವು ಸಹಕಾರ ಬ್ಯಾಂಕ್ಗಳು ಅವ್ಯವಹಾರ ನಡೆಸಿವೆ. ಈ ಬಗ್ಗೆ ತನಿಖೆ ಮಾಡುವುದು ಸೂಕ್ತ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಕರೆದಿರುವ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿ, "ಸಾಲಮನ್ನಾ ಯೋಜನೆಯನ್ನು ಸಹಕಾರಿ ಬ್ಯಾಂಕುಗಳು ರೈತರಿಗೆ ತಲುಪಿಸಬೇಕು. ಮೈತ್ರಿ ಸರ್ಕಾರದಲ್ಲಿ ನಾನು ಪ್ರಾಮಾಣಿಕವಾಗಿ ರೈತರ ಸಾಲಮನ್ನಾ ಮಾಡಿದ್ದೇನೆ. ನಾನು ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗದಿಪಡಿಸಿದಂತೆ ಬಹುತೇಕ ರೈತರು ದಾಖಲಾತಿ ನೀಡಿ ಸಾಲಮನ್ನಾ ಪಡೆದರು. ಸಾಲಮನ್ನಾ ವೇಳೆ ನನ್ನ ಕಾಲದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಆದರೆ ಸಿದ್ದರಾಮಯ್ಯನವರ ಕಾಲದಲ್ಲಿ ಕೆಲ ಬ್ಯಾಂಕ್ಗಳಿಂದ ಅವ್ಯವಹಾರವಾಗಿದೆ. ಇದರಲ್ಲಿ ಕೆಲ ರಾಜಕಾರಣಿಗಳ ಕೈವಾಡವೂ ಇದೆ. ಇದರ ಬಗ್ಗೆ ತನಿಖೆಯಾಗಬೇಕು" ಎಂದು ಒತ್ತಾಯಿಸಿದರು.
ಡಿಕೆಶಿ ಹೇಳಿಕೆಗೆ ಹೆಚ್ಡಿಕೆ ಕಿಡಿ :
ನಮ್ಮ ಕಾರ್ಯಕರ್ತರ ಮೇಲೆ ಎಫ್‌ಐಆರ್ ಹಾಕುವ, ಹೆದರಿಸುವ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವವರೆಗೂ ಹೋರಾಟ ಮಾಡುತ್ತೇನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಕಿಡಿಕಾರಿದ ಹೆಚ್ ಡಿಕೆ, "ಈಗ ಯಾಕೆ ಈ ವಿಚಾರ ಬಂತು ಎಂಬುದನ್ನು ಇವರು ಜನರಿಗೆ ಹೇಳಬೇಕು. ಅಷ್ಟಕ್ಕೂ ಈ ಸಂಸ್ಕೃತಿ ಬರಲು ಪ್ರೇರೇಪಕರು ಯಾರು?. ಕಾಂಗ್ರೆಸ್ ನವರಿಗೆ ಈಗ ಜ್ಞಾನೋದಯವಾಗಿದೆಯಾ? ಚುನಾವಣೆ ವೇಳೆ ಇದು ನೆನಪಿಗೆ ಬಂದಿದೆಯಾ?ಜನರೇನು ದಡ್ಡರಲ್ಲ" ಎಂದು ತಿರುಗೇಟು ನೀಡಿದರು.
"ಜಾತಿ ರಾಜಕಾರಣವನ್ನು ಇವರು ಗುತ್ತಿಗೆ ಪಡೆದಿದ್ದಾರಾ?. ಜಾತಿಗಳ ಮೇಲೆ ದಬ್ಬಾಳಿಕೆ ನಡೆದಾಗ ತಡೆಯೋ ಕೆಲಸ ಯಾಕೆ ಮಾಡಲಿಲ್ಲ. ಈಗ ನಮ್ಮ ಜಾತಿಯವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಾವೆಲ್ಲಾ ಒಂದಾಗಬೇಕು ಅಂತಾ ಚರ್ಚೆ ಮಾಡುತ್ತಿದ್ದಾರೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವಾಗ ಗಾಜಿನ ಮನೆಯಲ್ಲಿ ಕುಳಿತವರು, ಹೊಡೆದವರು ಯಾರು ಅನ್ನೋದನ್ನು ತಿಳಿದುಕೊಂಡು ಮಾತನಾಡಲಿ" ಎಂದ್ರು.
ಶಾಲೆ ಆರಂಭ ಬೇಡ :
"ಶಾಲೆಗಳನ್ನು ಆರಂಭ ಮಾಡುವ ಸರ್ಕಾರದ ನಿರ್ಧಾರ ಸೂಕ್ತವಲ್ಲ. ಪೋಷಕರು ಸಹ ಶಾಲೆ ಆರಂಭ ಮಾಡವುದು ಬೇಡ ಎಂದು ಹೇಳುತ್ತಿದ್ದಾರೆ. 'ವಿದ್ಯಾಗಮ' ಯೋಜನೆಯಲ್ಲಿ ಶಿಕ್ಷಕರು ಕೊರೊನಾಗೆ ತುತ್ತಾಗಿದ್ದಾರೆ. ಕೆಲವರು ಸಾವನ್ನಪ್ಪಿದ್ದಾರೆ. ಜೀವ ಮುಖ್ಯ, ಜೀವ ಇದ್ದರೆ ವಿದ್ಯೆ ಕಲಿಯಬಹುದು. ಯಾರದೋ ಒತ್ತಡಕ್ಕೆ ಮಣಿದು ಶಾಲೆ ಆರಂಭ ಮಾಡುವುದು ಬೇಡ. ಮುಖ್ಯಮಂತ್ರಿಗಳೊಂದಿಗೆ ನಾನೇ ಮಾತನಾಡಿ ಶಾಲೆಗಳನ್ನು ಆರಂಭಿಸುವುದು ಬೇಡವೆಂದು ಮನವಿ ಮಾಡುತ್ತೇನೆ" ಎಂದರು.