ಬೆಂಗಳೂರು: ಕಾಮಗಾರಿಗಳಿಗೆ ಅನುದಾನ ಬಿಡುಗಡೆ ವಿಳಂಬ ವಿಚಾರವಾಗಿ ಜೆಡಿಎಸ್ ಸದಸ್ಯರು ವಿಧಾನಸಭೆ ಮುಂದೂಡಿದರೂ ಧರಣಿ ಕುಳಿತುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸದನದ ಬಾವಿಯಲ್ಲಿ ಧರಣಿ ಕೂತು ಜೆಡಿಎಸ್ ಸದಸ್ಯರು ತಮ್ಮ ಅಸಮಾಧಾನ ಹೊರಹಾಕಿದರು. 2019-20ರಿಂದ ಅನುದಾನ ಸ್ಥಗಿತಗೊಳಿಸಲಾಗಿದೆ. ಆದರೆ ಅವರಿಗೆ ಬೇಕಾದ ಕ್ಷೇತ್ರಗಳಿಗೆ 3000 ಕೋಟಿ ರೂ. ಅನುದಾನ ಕೊಡಲಾಗಿದೆ. ಹಳೇ ಕಾಮಗಾರಿಯ ಅನುದಾನವನ್ನು ತಡೆ ಹಿಡಿಯಲಾಗಿದೆ. ಹೊಸ ಕಾಮಗಾರಿಗೂ ಅನುದಾನವೂ ಸಿಗುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಮನವೊಲಿಕೆಗೆ ಯತ್ನಿಸಿದರೂ ಜೆಡಿಎಸ್ ಶಾಸಕರು ಧರಣಿ ಮುಂದುವರೆಸಿದರು. ಶಿವಲಿಂಗೇಗೌಡ, ಹೆಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ಹೆಚ್.ಕೆ.ಕುಮಾರಸ್ವಾಮಿ, ಅನ್ನದಾನಿ, ಪುಟ್ಟರಾಜು, ಕೃಷ್ಣಾ ರೆಡ್ಡಿ ಸೇರಿದಂತೆ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಲು ಮುಂದಾದರು.
ಬೇಡಿಕೆ ಈಡೇರಿಸುವ ಅಭಯ ನೀಡಿದ ಸಿಎಂ:
ಸದನದೊಳಗೆ ಅಹೋರಾತ್ರಿ ಧರಣಿ ನಡೆಸಲು ಮುಂದಾದ ಜೆಡಿಎಸ್ ಶಾಸಕರಿಗೆ ಕೊನೆಗೆ ಸಿಎಂ ಬೇಡಿಕೆ ಈಡೇರಿಸುವ ಅಭಯ ನೀಡಿದರು. ಸಿಎಂ ಅಭಯ ನೀಡಿದ ಹಿನ್ನೆಲೆ ಜೆಡಿಎಸ್ ಸದಸ್ಯರು ಧರಣಿಯನ್ನು ಕೈ ಬಿಟ್ಟರು.
ಸಿಎಂ ಅವರೇ ಸದನಕ್ಕೆ ಬಂದು ನಿಮ್ಮ ಎಲ್ಲಾ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ನಿಮ್ಮ ಕ್ಷೇತ್ರದ ಅನುದಾನ ನೀಡ್ತೇವೆ, ಕುಮಾರಸ್ವಾಮಿ ಸರ್ಕಾರದಲ್ಲಿ ಮಂಜೂರಾಗಿದ್ದ ಯೋಜನೆಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರತಿಭಟನೆ ಕೈ ಬಿಟ್ಟಿದ್ದೇವೆ ಎಂದು ಶಿವಲಿಂಗೇಗೌಡ ತಿಳಿಸಿದರು.
ಓದಿ: ಕರ್ನಾಟಕ ಉಪಚುನಾವಣೆ: ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಇವರು..
ಹೆಚ್.ಡಿ.ರೇವಣ್ಣ ಮಾತನಾಡಿ, ನಮ್ಮ ಶಾಸಕರಿಗೆ ಬೇರೆ ಉದ್ದೇಶ ಇಲ್ಲ. ಮೈತ್ರಿ ಸರ್ಕಾರದಲ್ಲಿ ಶುರುವಾದ ಕೆಲಸಗಳು ಮುಗೀಬೇಕು. ಅದಕ್ಕೆ ಅನುದಾನ ಬೇಕು. ಇಷ್ಟೇ ನಮಗೆ ಬೇಕಿರೋದು. ಸಿಎಂ ಎಲ್ಲ ಶಾಸಕರ ಕ್ಷೇತ್ರಗಳಿಗೂ ಅನುದಾನ ಕೊಡುವ ಭರವಸೆ ಕೊಟ್ಟಿದ್ದಾರೆ ಎಂದರು.