ಬೆಂಗಳೂರು : ಭೂ ಪರಿವರ್ತನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದವರಿಗೆ 72 ಗಂಟೆಗಳಲ್ಲೇ ಅನುಮತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕೈಗಾರಿಕೆ, ಮನೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತನೆ ಮಾಡುವ ಕೆಲಸ ವಿನಾಕಾರಣ ವಿಳಂಬವಾಗುತ್ತಿದೆ. ಅರ್ಜಿ ಸಲ್ಲಿಸಿದವರು ತಿಂಗಳಾನುಟ್ಟಲೆ ಕಾಲ ಕಾಯುವ ಪರಿಸ್ಥಿತಿ ಇದೆ. ಇಂತಹ ವಿಳಂಬದಿಂದಾಗಿ ಕೈಗಾರಿಕೆ ಪ್ರಾರಂಭಿಸುವುದು ಸೇರಿದಂತೆ ಹಲವು ಉದ್ದೇಶಗಳಿಗೆ ಹೊಡೆತ ಬೀಳುತ್ತಿದೆ. ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ಸರ್ಕಾರದ ಉದ್ದೇಶ. ಆದರೆ ಭೂಪರಿವರ್ತನೆಗೆ ಆಗುತ್ತಿರುವ ವಿಳಂಬ ಧೋರಣೆಯಿಂದ ದೊಡ್ಡ ಮಟ್ಟದ ಸಮಸ್ಯೆಗಳಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಭೂ ಪರಿವರ್ತನೆಗೆ ಅನುಮತಿ ಪಡೆಯಲು ವಿಳಂಬವಾಗುತ್ತಿರುವುದರಿಂದ ಕೈಗಾರಿಕೆ ಸ್ಥಾಪಿಸಲು ಬಂಡವಾಳಕ್ಕಾಗಿ ಸಾಲ ಪಡೆಯುವ ಉದ್ಯಮಿಗಳು ತಮ್ಮ ಉದ್ದೇಶದಿಂದ ಹಿಂದೆ ಸರಿಯುವ ಪ್ರಕರಣಗಳು ಹೆಚ್ಚುತ್ತಿವೆ ಎಂದರು. ಕೈಗಾರಿಕೆ, ಮನೆ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತನೆ ಮಾಡುವ ಕಾರ್ಯದಲ್ಲಿ ವಿಳಂಬವಾಗಕೂಡದು ಎಂಬುದು ಸರ್ಕಾರದ ನಿಲುವು ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಕಾರಣಕ್ಕಾಗಿ ಇನ್ನು ಮುಂದೆ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದವರಿಗೆ 72 ಗಂಟೆಗಳಲ್ಲಿ ಅನುಮತಿ ನೀಡಲು ತೀರ್ಮಾನಿಸಲಾಗಿದೆ. ಆದರೆ ಹೀಗೆ ಅರ್ಜಿ ಸಲ್ಲಿಸುವವರು ತಾವು ಪರಿವರ್ತನೆಗೆ ಕೋರಿದ ಭೂಮಿ ಸರ್ಕಾರದ್ದಾಗಲೀ, ಪರಿಶಿಷ್ಟರಿಗಾಗಲೀ ಅಥವಾ ಯಾವುದೇ ನಿಯಮಗಳಿಗೆ ವಿರುದ್ಧವಾಗಿಲ್ಲ ಎಂಬ ಪ್ರಮಾಣಪತ್ರ ನೀಡಬೇಕು. ಅವರು ನೀಡುವ ಪ್ರಮಾಣ ಪತ್ರವನ್ನು ಪಡೆದು 72 ಗಂಟೆಗಳಲ್ಲಿ ಭೂ ಪರಿವರ್ತನೆಗೆ ಅನುಮತಿ ನೀಡಲಾಗುವುದು. ಒಂದು ವೇಳೆ ಅರ್ಜಿದಾರರು ಸಲ್ಲಿಸಿದ ಪ್ರಮಾಣಪತ್ರದಲ್ಲಿರುವುದು ತಪ್ಪು ಇರುವುದು ಕಂಡು ಬಂದರೆ ತಕ್ಷಣವೇ ಭೂ ಪರಿವರ್ತನೆಗೆ ನೀಡಿದ ಅನುಮತಿ ರದ್ದಾಗಲಿದೆ. ಮತ್ತು ಭೂ ಪರಿವರ್ತನೆಗಾಗಿ ಸಲ್ಲಿಸಿದ ಶುಲ್ಕವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಸಚಿವರು ಹೇಳಿದರು.
ಈ ಮಧ್ಯೆ ಭೂ ಪರಿವರ್ತನೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ವಜಾ ಮಾಡಕೂಡದು. ಬದಲಿಗೆ ಪ್ರಮಾಣಪತ್ರ ಪಡೆದುಕೊಂಡು ಅನುಮತಿ ನೀಡಬೇಕು. ಯಾಕೆಂದರೆ ಪ್ರಮಾಣ ಪತ್ರದಲ್ಲಿ ತಪ್ಪಿದ್ದರೆ ಅದರಿಂದ ಅರ್ಜಿದಾರನಿಗೇ ಸಮಸ್ಯೆ ಎಂದರು.
ಮಳೆಯಿಂದ ಹಾನಿ : ಮೇ 15 ರಿಂದ 21 ರವರೆಗೆ ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ಹಾನಿಗೀಡಾಗಿದ್ದು, ಜನ, ಜಾನುವಾರು, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ವಿವರ ನೀಡಿದ ಸಚಿವರು, ಮಳೆಯಿಂದಾಗಿ 12 ಮಂದಿ ಮೃತಪಟ್ಟಿದ್ದರೆ, 432 ಜಾನುವಾರುಗಳು ಮೃತಪಟ್ಟಿವೆ. 51 ಮನೆಗಳು ಪೂರ್ಣ ಹಾನಿಯಾಗಿದ್ದು, 4242 ಮನೆಗಳು ಭಾಗಶ: ಹಾನಿಗೊಳಗಾಗಿವೆ. 41 ಗುಡಿಸಲುಗಳು ನೆಲಕ್ಕುರುಳಿವೆ. 7010 ಹೆಕ್ಟೇರ್ ಕೃಷಿ ಜಮೀನು, 5736 ಎಕರೆ ತೋಟಗಾರಿಕೆ ಜಮೀನು ಹಾನಿಯಾಗಿದ್ದು 4711 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 109 ಶಾಲೆಗಳು ಹಾನಿಗೊಳಗಾಗಿವೆ ಎಂದು ವಿವರಿಸಿದರು.