ಜೈಶ್ರೀರಾಮ್, ಜೈ ಹನುಮಾನ್ ಅಂದ್ರೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುತ್ತಾ.. ಮರಿತಿಬ್ಬೇಗೌಡ ಪ್ರಶ್ನೆ - bangalore latest news
ಬಜೆಟ್ನಲ್ಲಿ ಇಂಧನ ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾಗಲಿದೆ, ತೆರಿಗೆ ವಿನಾಯಿತಿ ನೀಡಲಿದೆ ಎಂದುಕೊಂಡಿದ್ದೆ. ಜೈಶ್ರೀರಾಮ್, ಜೈ ಹನುಮಾನ್ ಅಂದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುತ್ತದೆಯೇ? ಸರ್ಕಾರ ವಿನಾಯಿತಿ ನೀಡಿ ಇಂಧನ ಬೆಲೆ ಇಳಿಸಬೇಕು..
ಬೆಂಗಳೂರು : ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಮಾಡಿದ ವೆಚ್ಚದ ಮಾಹಿತಿಯನ್ನು ಮುಚ್ಚಿಟ್ಟಿದೆ. ಕನಿಷ್ಟ ಶ್ವೇತ ಪತ್ರ ಹೊರಡಿಸಬಹುದಿತ್ತು ಇಲ್ಲ ಬಜೆಟ್ನಲ್ಲಾದರೂ ತಿಳಿಸಬಹುದಿತ್ತು ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟರು.
ವಿಧಾನಪರಿಷತ್ನಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಕನಿಷ್ಠ ಮಟ್ಟದಲ್ಲಿ ಇದಕ್ಕೊಂದು ಆಡಿಟ್ ಮಾಡುವ ಕಾರ್ಯ ಆಗಿಲ್ಲ.
ಪರಿಹಾರ ನಿಧಿಗೆ ಯಾವ್ಯಾವ ಮೂಲಗಳಿಂದ ಎಷ್ಟು ಹಣ ಬಂದಿದೆ ಎಂಬ ಮಾಹಿತಿ ನೀಡುವ ಕಾರ್ಯ ಆಗಿಲ್ಲ. ಒಟ್ಟಾರೆ ಎಲ್ಲವನ್ನೂ ಮುಚ್ಚಿಡಲಾಗಿದೆ ಎಂದು ಆರೋಪಿಸಿದರು.
10 ಸಕ್ಕರೆ ಕಾರ್ಖಾನೆಗಳಿಗೆ 24 ಕೋಟಿ ರೂ. ಅನುದಾನ ನೀಡಲಾಗಿದೆ. 33 ಕಂಪನಿಗೆ 1,075 ಕೋಟಿ ತೆರಿಗೆ ಮನ್ನಾ ಮಾಡಿದ್ದಾರೆ. ಇದರ ಬಗ್ಗೆ ವಿವರಣೆ ನೀಡಿಲ್ಲ. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಇದರ ಅಗತ್ಯ ಇತ್ತೆ?.
ಬಡವರಿಗೆ, ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಬಡ ಮಹಿಳೆಯರ ಪರ ಕಾರ್ಯ ನಿರ್ವಹಿಸಿ, ಅದರ ಬದಲು ಈ ತೆರಿಗೆ ಮನ್ನಾ ಅಗತ್ಯವಿತ್ತೆ?. ಇದು ಜನಪರ ಸರ್ಕಾರವೇ? ಯಾವ ಕಾರಣಕ್ಕೆ ತೆರಿಗೆ ಪರಿಹಾರ ನೀಡಿದ್ದೀರಿ ಎಂಬುದಕ್ಕೆ ಮಾಹಿತಿ ನೀಡಿ ಎಂದರು.
ಅನ್ನದಾತರಿಗೆ ನೆರವಾಗಿ : ಈ ಸಂಕಷ್ಟ ಸಂದರ್ಭದಲ್ಲಿ ರಾಜ್ಯಕ್ಕಾಗಿ ಶ್ರಮಿಸಿ ಆಹಾರ ಒದಗಿಸಿದವರು ರೈತರು, ಶ್ರಮಿಕರು. ಆದ್ರೆ, ಅವರಿಗೆ ಈ ಬಜೆಟ್ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಕೃಷಿ ಆಧಾರಿತ ಕೈಗಾರಿಕೆಗೆ ಒತ್ತು ಕೊಡಿ. ಕನಿಷ್ಠ 10 ಗಂಟೆ ರೈತರಿಗೆ ವಿದ್ಯುತ್ ಕೊಡಿ. ಹನಿ ನೀರಾವರಿಯಲ್ಲಿ ಸೌಲಭ್ಯ ಕಲ್ಪಿಸಿ.
ಕೇಂದ್ರ ಸರ್ಕಾರ ಕೆಲ ಬೆಳೆಗೆ ಬೆಂಬಲ ಬೆಲೆ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆ ಜಾರಿಗೆ ಬರುತ್ತಿಲ್ಲ. ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ತಂದಿದ್ದೀರಿ. ಆದ್ರೆ, ಏನು ಪ್ರಯೋಜನ? 10 ಸಾವಿರ ಕೋಟಿ ಆವರ್ತ ನಿಧಿಯನ್ನು ರೈತರ ಬೆಳೆಯನ್ನು ಸಂಕಷ್ಟದ ಸಂದರ್ಭದಲ್ಲಿ ಖರೀದಿಸಲು ಮೀಸಲಿಡಿ ಎಂದು ಸಲಹೆ ಇತ್ತರು.
ನಿರೀಕ್ಷೆ ಹುಸಿ : ಜೈ ಜವಾನ್, ಜೈ ಕಿಸಾನ್ ಅನ್ನೋದು ಈ ಸರ್ಕಾರದಲ್ಲಿ ಜೈಲ್ ಕಿಸಾನ್ ಆಗಿದೆ. ಎಲ್ಲೆಂದರಲ್ಲಿ ರೈತರನ್ನು ಜೈಲಿಗೆ ಹಾಕುತ್ತಿದ್ದಾರೆ. ನೀರಾವರಿ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿ ಇಲ್ಲ. ಹಿಂದಿನ ಮೈತ್ರಿ ಸರ್ಕಾರ ನೀಡಿದ್ದ 2,675 ಕೋಟಿ ರೂ. ಅನುದಾನದ ಯೋಜನೆಯನ್ನು ಏಕೆ ಕೈ ಬಿಡಲಾಗಿದೆ? ಎಂದು ಪ್ರಶ್ನಿಸಿದರು.
ಕಾಡಾ ಅಭಿವೃದ್ಧಿಗೆ 30 ಕೋಟಿ ರೂ. ನೀಡಲಾಗಿದೆ. ಮೈಸೂರು ಭಾಗದಲ್ಲಿ 8 ಜಿಲ್ಲೆ ಬರಲಿವೆ. 629 ಸ್ವಸಹಾಯ ಸಂಘಗಳು, 8 ಚಿಕ್ಕ, 4 ದೊಡ್ಡ ಜಲಾಶಯ ನಿರ್ವಹಣೆ ಆಗಬೇಕು. ರೈತರ ಪರ ಇದ್ದೇವೆ ಎನ್ನುತ್ತಾರೆ, ಯಾವ ರೀತಿ ಇದನ್ನು ಬಣ್ಣಿಸಬೇಕು? ಮಹಾಭ್ರಷ್ಟ ಸರ್ಕಾರ ಇದು ಎಂದು ಟೀಕಿಸಿದರು.
ಹೊಸ ಶೈಕ್ಷಣಿಕ ನೀತಿ ವಿಷಯ ಸಂತಸದ ವಿಚಾರ. ಆದರೆ, ಲಕ್ಷಾಂತರ ಮಕ್ಕಳು ಶಾಲೆಗೆ ಅಡ್ಮೀಷನ್ ಆಗಿಲ್ಲ. ಅವರನ್ನು ವಾಪಸ್ ಶಾಲೆಗೆ ಕರೆತರಲು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ ಎಂದು ಆರೋಪಿಸಿದರು.
ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆ ಭರ್ತಿ ಮಾಡಿ. ಖಾಯಂ ಪ್ರಾಂಶುಪಾಲರಿಲ್ಲ, ಅತಿಥಿ ಉಪನ್ಯಾಸಕರ ಖಾಯಂಗೆ ಕ್ರಮ ಆಗಿಲ್ಲ, ಸ್ಮಾರ್ಟ್ ಕ್ಲಾಸ್ ಹೆಸರಲ್ಲಿ 2015ರಿಂದ ಈವರೆಗೆ 500 ಕೋಟಿ ವ್ಯಯಿಸಿ ಸ್ಮಾರ್ಟ್ ಕ್ಲಾಸ್ ಮಾಡಲಾಗಿತ್ತು. ಈಗ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹಿಂದಿನ ಹಣ ಬಳಕೆಯಲ್ಲಿ ಆದ ಅವ್ಯವಹಾರದ ತನಿಖೆ ಮಾಡಿಸಿ ಎಂದು ಸವಾಲು ಎಸೆದರು.
ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡಲಾಗಿದೆ, ಇದು ಸಂತಸ. ಆದರೆ, ಗ್ರಾಮೀಣ ಭಾಗದ ಮಹಿಳೆಯರು, ಸ್ವ-ಸಹಾಯ ಸಂಘಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಎಂದು ಸಲಹೆ ಇತ್ತರು.
ಇದನ್ನೂ ಓದಿ: ಬೆಂಗಳೂರು, ಗಡಿ ಜಿಲ್ಲೆ ಕಲಬುರಗಿ, ಬೀದರ್ನಲ್ಲಿ ಹೆಚ್ಚು ಗಮನ ಹರಿಸಿ: ಸಿಎಂಗೆ ಪ್ರಧಾನಿ ಮೋದಿ ಸೂಚನೆ
ಸಚಿವ ಆನಂದ್ ಸಿಂಗ್ ಅನುಪಸ್ಥಿತಿಯಲ್ಲಿ ಮರಿತಿಬ್ಬೇಗೌಡರು ವಿಚಾರ ಪ್ರಸ್ತಾಪಿಸಿದಾಗ, ಒಂದಿಷ್ಟು ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಂಡ್ಯದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ರೈಲ್ವೆ ಟ್ರ್ಯಾಕ್ ಬಳಸಿ ತಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿತ್ತು. ಕೆಲವು ಭಾಗದಲ್ಲಿ ತಡೆಗೋಡೆ ನಿರ್ಮಾಣ ಆಗಿಲ್ಲ. ಮಾಡಿ ಎಂದಾಗ ಕೇಂದ್ರದಿಂದ ಅನುದಾನ ಸಿಕ್ಕಿಲ್ಲ ಎಂದರು.
ಸಚಿವರ ಅನುಪಸ್ಥಿತಿಯಲ್ಲಿ ಹೆಸರು ಪ್ರಸ್ತಾಪ ಬೇಡ ಎಂದು ಆಡಳಿತ ಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ ಸಚಿವ ಸಿ.ಸಿ ಪಾಟೀಲ್ ಎದ್ದುನಿಂತು ಸಚಿವನಾಗಿ 100 ಕೋಟಿ ರೂ. ಕೊಡಿಸಿದ್ದು, ಕಾಮಗಾರಿ ನಡೆಯುತ್ತಿದೆ. ಕೇಂದ್ರದ ಸಹಕಾರ ಸಹ ನಿರೀಕ್ಷಿಸುತ್ತಿದ್ದೇವೆ ಎಂದು ಭರವಸೆ ಇತ್ತರು.
ಕಲಾಪದಲ್ಲಿ ಗದ್ದಲ : ಬಜೆಟ್ನಲ್ಲಿ ಇಂಧನ ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾಗಲಿದೆ, ತೆರಿಗೆ ವಿನಾಯಿತಿ ನೀಡಲಿದೆ ಎಂದುಕೊಂಡಿದ್ದೆ. ಜೈಶ್ರೀರಾಮ್, ಜೈ ಹನುಮಾನ್ ಅಂದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಯುತ್ತದೆಯೇ? ಸರ್ಕಾರ ವಿನಾಯಿತಿ ನೀಡಿ ಇಂಧನ ಬೆಲೆ ಇಳಿಸಬೇಕು ಎಂದರು. ಆಡಳಿತ ಪಕ್ಷ ಸದಸ್ಯರು ಇದನ್ನು ಆಕ್ಷೇಪಿಸಿದಾಗ ಮತ್ತೆ ಗದ್ದಲದ ವಾತಾವರಣ ನಿರ್ಮಾಣವಾಯಿತು.