ಕ್ಯಾನ್ಸರ್ ಗೆದ್ದು ಬಾಸ್‌ನಂತೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಶಿವಣ್ಣ; 'ಮಹಾ ಮನರಂಜನೆ'ಗೆ ನೀವು ರೆಡಿಯಾಗಿ! - SHIVA RAJKUMAR
ಜನವರಿ 26, ಗಣರಾಜ್ಯೋತ್ಸವದಂದು ಅಮೆರಿಕದಿಂದ ರಾಜ್ಯಕ್ಕೆ ಮರಳಿರುವ ಶಿವಣ್ಣ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
![ಕ್ಯಾನ್ಸರ್ ಗೆದ್ದು ಬಾಸ್‌ನಂತೆ ಕಿರುತೆರೆಯಲ್ಲಿ ಕಾಣಿಸಿಕೊಂಡ ಶಿವಣ್ಣ; 'ಮಹಾ ಮನರಂಜನೆ'ಗೆ ನೀವು ರೆಡಿಯಾಗಿ! Shiva Rajkumar Couple](https://etvbharatimages.akamaized.net/etvbharat/prod-images/30-01-2025/1200-675-23434027-thumbnail-16x9-newsss.jpg?imwidth=3840)
![ETV Bharat Entertainment Team author img](https://etvbharatimages.akamaized.net/etvbharat/prod-images/authors/entertainment-1716536424.jpeg)
By ETV Bharat Entertainment Team
Published : Jan 30, 2025, 12:39 PM IST
ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಚಂದನವನ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ಡಮ್ ಹೊಂದಿರುವ ಶಿವರಾಜ್ಕುಮಾರ್ ಕ್ಯಾನ್ಸರ್ ಗೆದ್ದು ಬಂದ ರಿಯಲ್ ಹೀರೋ. ಕೇವಲ ಸಿನಿಮಾ ಮಾತ್ರವಲ್ಲದೇ ನಿಜಜೀವನದಲ್ಲೂ ಹೀರೋನಂತೆ ಗುರುತಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಮತ್ತೊಮ್ಮೆ ತಮ್ಮ ಪವರ್ ಪ್ರದರ್ಶಿಸಿದ್ದಾರೆ. ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ತರಿಸಿದ್ದಾರೆ.
ಕರುನಾಡ ಚಕ್ರವರ್ತಿಯ ಚೈತನ್ಯ ಹೆಚ್ಚಿನವರಿಗೆ ಮಾದರಿ ಅಂತಾನೇ ಹೇಳಬಹುದು. ವಯಸ್ಸು 60 ದಾಟಿದ್ರೂ ಅವರ ಎನರ್ಜಿಗೆ ಸರಿಸಾಟಿ ಯಾರು ಎಂಬ ಪ್ರಶ್ನೆ ಇದ್ದೇ ಇದೆ. ಯುವಕರೂ ನಾಚುವಂತೆ ಸಖತ್ ಆ್ಯಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಲೇ ಬಂದಿದ್ದಾರೆ. ಸಿನಿಮಾ ಕೆಲಸ, ಇತರೆ ಸಿನಿಮಾಗಳಿಗೆ ಸರ್ಪೋರ್ಟ್ ಜೊತೆಗೆ ಫ್ಯಾಮಿಲಿ ಮ್ಯಾನ್ ಆಗಿಯೂ ಗುರುತಿಸಿಕೊಂಡಿರುವ ಶಿವಣ್ಣ ಇದೀಗ ಕ್ಯಾನ್ಸರ್ ಗೆದ್ದು ಬಂದಿದ್ದಾರೆ.
ಶಿವರಾಜ್ಕುಮಾರ್ 2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕೆಲ ದಿನಗಳವರೆಗೆ ಅಲ್ಲೇ ಚಿಕಿತ್ಸೆ, ವಿಶ್ರಾಂತಿ ಪಡೆದು ಚೇತರಿಸಿಕೊಂಡಿದ್ದಾರೆ. 2025ರ ಜನವರಿ 26, ಗಣರಾಜ್ಯೋತ್ಸವದಂದು ರಾಜ್ಯಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ಆರೋಗ್ಯ ವಿಚಾರಿಸಲು ಗಣ್ಯರು ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಸ್ವತಃ ನಟನೇ ಸರ್ವರಿಗೂ ದರ್ಶನ ಕೊಡೋ ಸಲುವಾಗಿ ಕಿರುತೆರೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಂಚಿಕೆ ಶನಿ-ಭಾನು ರಾತ್ರಿ 7:30ಕ್ಕೆ ಪ್ರಸಾರ ಆಗಲಿದ್ದು, ಪ್ರೇಕ್ಷಕರು ಕಾತರರಾಗಿದ್ದಾರೆ.
ವಾಹಿನಿ, ''ಚಂದನವನದ ಮಹಾನಟಿಯರು, ತಾರೆಗಳ ಸಮಾಗಮದಲ್ಲಿ ಮಹಾ ಮನರಂಜನೆಯ ಸ್ವರ್ಗವಾಯ್ತು ಸಂಗೀತ ವೇದಿಕೆ! ವೈಟ್ ಗೋಲ್ಡ್ ಸರಿಗಮಪ 'ಮಹಾ ಮನರಂಜನೆ', ಶನಿ-ಭಾನು ರಾತ್ರಿ 7:30ಕ್ಕೆ'' ಎಂಬ ಕ್ಯಾಪ್ಷನ್ನಡಿ ಪ್ರೋಮೋ ಅನಾವರಣಗೊಳಿಸಿದೆ. ಪ್ರೋಮೋ ಕೊನೆಗೆ ಶಿವಣ್ಣನ ಎಂಟ್ರಿ ಆಗಿದ್ದು, ಇದು ದೊಡ್ಡ ಸರ್ಪ್ರೈಸ್ ಎನ್ನುವಂತಿತ್ತು ಅಲ್ಲಿದ್ದವರ ರಿಯಾಕ್ಷನ್. ಆ್ಯಂಕರ್ ಅನುಶ್ರಿ ಮಾತನಾಡಿ, ಜೀವನ ಗೆದ್ದು ಬಂದಂತಹ ನಿಜವಾದ ಗೆಲುವಿನ ಸರದಾರರು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿದ್ದವರು ಶಿವಣ್ಣನನ್ನು ಬಿಗಿದಪ್ಪಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಪವಿತ್ರ ಸ್ನಾನದ ನಕಲಿ ಫೋಟೋ: ಹರಿಬಿಟ್ಟವರ ವಿರುದ್ಧ ದೂರು ದಾಖಲು
ಶಿವರಾಜ್ಕುಮಾರ್ ಅವರಿಗೆ ಎಂದಿನಂತೆ ಪತ್ನಿ ಗೀತಾ ಸಾಥ್ ನೀಡಿದ್ದಾರೆ. ಜೊತೆಯಾಗಿ ಕೈ ಕೈ ಹಿಡಿದು ಜನಪ್ರಿಯ ದಂಪತಿ ವೇದಿಕೆ ಏರಿದ್ದಾರೆ. ಹ್ಯಾಟ್ರಿಕ್ ಹೀರೋ ಬ್ಲ್ಯಾಕ್ ಔಟ್ಫಿಟ್, ಕ್ಯಾಪ್ ಧರಿಸಿದ್ದು, ಟೀ ಶರ್ಟ್ ಮೇಲೆ ಬಾಸ್ ಎಂದು ಬರೆಯಲಾಗಿತ್ತು. ಈ ಬಾಸ್ ವರ್ಡ್ ಎಲ್ಲರ ಗಮನ ಸೆಳೆದಿದೆ. ಬಾಸ್ನಂತೆಯೇ ಸೆಂಚುರಿ ಸ್ಟಾರ್ನ ಎಂಟ್ರಿ ಆಗಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: 'ಸುದೀಪ್ ವಿಶೇಷ ಉಡುಗೊರೆಗೆ ಬೆಲೆ ಕಟ್ಟೋಕ್ಕಾಗಲ್ಲ' - ಬಾಲ ಕಲಾವಿದನ ಮನದಾಳ
ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ''ರೆ ರೆ ರೆ. ಭಜರಂಗಿ. ಶಿವಣ್ಣ. ದಿ ರಿಯಲ್ ಒಜಿ ಈಸ್ ಬ್ಯಾಕ್'' ಎಂದು ಬರೆದಿದ್ದಾರೆ. ಕಾರ್ಯಕ್ರಮಕ್ಕೆ ಈಗ ಒಂದು ಕಳೆ ಬಂತು ಎಂದು ಮತ್ತೋರ್ವ ಇಂಟರ್ನೆಟ್ ಬಳಕೆದಾರರು ತಿಳಿಸಿದ್ದಾರೆ. ವೆಲ್ಕಮ್ ಬ್ಯಾಕ್ ಶಿವಣ್ಣ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅವರ ವಿಶ್ರಾಂತಿಗೆ ಸಮಯ ಕೊಡಿ ಎಂಬಂತೆ ಹಲವರು ತಮ್ಮ ಸಲಹೆ ನೀಡಿದ್ದಾರೆ.