ಬೆಂಗಳೂರು: ಎಲ್ಲಾ ಇಲಾಖೆಗಳಡಿ ಬರುವ ನಿಗಮ/ಮಂಡಳಿ/ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳಿಗೆ ತಡೆಹಿಡಿಯಲಾಗಿದ್ದ ಅನುದಾನ ಬಿಡುಗಡೆಗೊಳಿಸಿ ಸರ್ಕಾರ ಆದೇಶಿಸಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿನ ಎಲ್ಲಾ ಇಲಾಖೆಗಳಡಿ ಬರುವ ನಿಗಮ/ಮಂಡಳಿ/ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅನುದಾನ ತಡೆಹಿಡಿದ ಆದೇಶವನ್ನು ಹಿಂಪಡೆದಿದ್ದಾರೆ. ಈ ಸಂಬಂಧ ಆರ್ಥಿಕ ಇಲಾಖೆ ಅನುದಾನ ಬಿಡುಗಡೆ ಆದೇಶ ಹೊರಡಿಸಿದೆ.
ಎಲ್ಲಾ ಇಲಾಖೆಗಳು ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ/ಮಂಡಳಿ/ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪರಿಶೀಲಿಸಿ, ನಿಯಮಾನುಸಾರವಿರುವುದನ್ನು ಖಚಿತಪಡಿಸಿಕೊಂಡು ಹಿಂದಿನಂತೆಯೇ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದೆ. ಹಿಂದಿನ ಸರ್ಕಾರದಿಂದ ಅನುಮೋದನೆಗೊಂಡು ಇನ್ನೂ ಪ್ರಾರಂಭವಾಗದಿರುವ (unstarted) ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಸಚಿವರ ಅನುಮೋದನೆಯೊಂದಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಡಳಿತ ಇಲಾಖೆಯ ಕಾರ್ಯದರ್ಶಿಗಳು ಕ್ರಮ ವಹಿಸಲು ತಿಳಿಸಲಾಗಿದೆ.
2023-24ರ ಆಯವ್ಯಯದಲ್ಲಿ (ಜುಲೈ) ಅವಕಾಶ ಮಾಡಿಕೊಂಡಿರುವ ಹೊಸ ಯೋಜನೆ/ಕಾಮಗಾರಿಗಳ ಬಗ್ಗೆ ಆರ್ಥಿಕ ಇಲಾಖೆಯಿಂದ ನೀಡಲಾದ ಆಯವ್ಯಯ ಸಲಹಾ ಟಿಪ್ಪಣಿ (Budget Advise) ಹಾಗೂ ಅಧಿಕಾರ ಪ್ರತ್ಯಾಯೋಜನೆ ಆದೇಶದಲ್ಲಿನ ಕ್ರಮಗಳನ್ನು ಅನುಸರಿಸಿ ಆಡಳಿತ ಇಲಾಖೆ ಹೊಸ ಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ತಿಳಿಸಿದೆ.
ಕಳೆದ ವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರೂ ಅನುದಾನ ಬಿಡುಗಡೆಯಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದರು. ಇತ್ತ ಚಾಲ್ತಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗದ ಕಾರಣ ಕಾಮಗಾರಿಗಳು ಸ್ಥಗಿತವಾಗಿವೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳು ನಿಂತುಹೋಗಿತ್ತು. ಈ ಸಂಬಂಧ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅನುದಾನದ ಬಿಡುಗಡೆ ಆದೇಶ ಹೊರಡಿಸಲಾಗಿದೆ.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ ಅನುದಾನ ಹೆಚ್ಚಳ: ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಧಿನಿಯಮ, 2013ರಡಿ ಹಂಚಿಕೆಯಾಗುವ ಅನುದಾನ ಆ ಸಮುದಾಯಗಳ ಒಳಿತಿಗಾಗೇ ಬಳಕೆಯಾಗಬೇಕೆಂಬುದು ಬಹಳ ವರ್ಷಗಳ ಬೇಡಿಕೆ. ಕಾಯ್ದೆಯಲ್ಲಿನ ಸಣ್ಣ ಲೋಪವನ್ನು ಬಳಸಿಕೊಂಡು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಇದೀಗ ಕಾಯ್ದೆ ಸೆಕ್ಷನ್ 7(ಡಿ) ಕೈಬಿಡುವ ಮೂಲಕ ಅನುದಾನವನ್ನು ಆ ಸಮುದಾಯಗಳಿಗೆ ಖರ್ಚು ಮಾಡಬೇಕೆಂಬ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 4030 ಕೋಟಿ ರೂ. ಅನುದಾನ ಹೆಚ್ಚಳ: ಬಿಜೆಪಿಯವರ ಆರೋಪ ಸುಳ್ಳೆಂದ ಸಚಿವ ಹೆಚ್ ಸಿ ಮಹದೇವಪ್ಪ