ಬೆಂಗಳೂರು: ನಕಲಿ ಚಿನ್ನ ಮಾರಾಟ ಮಾಡುವ ಆರೋಪಿಗಳನ್ನು ಹಿಡಿಯುವ ರೀತಿ ಪೊಲೀಸರ ಸೋಗಿನಲ್ಲಿ ಚಿನ್ನದ ಅಂಗಡಿ ಮೇಲೆ ದಾಳಿ ಮಾಡಿದ್ದ ಮೂವರು ನಕಲಿ ಪೊಲೀಸರನ್ನು ಹಲಸೂರು ಗೇಟ್ ಠಾಣಾ ಸಿಬ್ಬಂದಿ ಬಂಧಿಸಿದ್ದಾರೆ.
ನಗರ್ತಪೇಟೆಯಲ್ಲಿರುವ ಚಿನ್ನಾಭರಣ ಪಾಲಿಶ್ ಮಾಡುವ ಗೀತಾ ಜ್ಯುವೆಲ್ಲರಿ ಶಾಪ್ಗೆ ಇದೇ ತಿಂಗಳು 11ರ ಮಧ್ಯರಾತ್ರಿ ಆರೋಪಿಗಳು ಜೀಪ್ ನಲ್ಲಿ ತೆರಳಿದ್ದರು. ಅಂಗಡಿ ಕದ ತಟ್ಟಿದ ಆರೋಪಿಗಳು, ಪೊಲೀಸ್ ವೇಷದಲ್ಲಿದ್ದ ಕಾರಣ ನಿಜವಾಗಿಯೂ ಅವರನ್ನು ಪೊಲೀಸರೆಂದೇ ಭಾವಿಸಿ ಅಂಗಡಿ ಸಿಬ್ಬಂದಿ ಆರೋಪಿಗಳು ಹೇಳಿದಂತೆ ಮಾಡಿದ್ದಾರೆ.
ದೀಪಾವಳಿ ಹಬ್ಬಕ್ಕೆ ನಕಲಿ ಚಿನ್ನ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿರುವುದರಿಂದ ದಾಳಿ ಮಾಡುತ್ತಿರುವುದಾಗಿ ಹೇಳಿರುವ ಖದೀಮರು, ಕೋಲ್ಕತ್ತಾದಲ್ಲಿ ಇದ್ದ ಮಾಲೀಕ ಕಾರ್ತಿಕ್ ಗೆ ಕರೆ ಮಾಡಿ ನಿಮ್ಮ ಅಂಗಡಿ ಮೇಲೆ ರೇಡ್ ಮಾಡಿದ್ದೇವೆ. ಪೊಲೀಸ್ ಠಾಣೆಗೆ ಬನ್ನಿ ಎಂದು ಕರೆ ಮಾಡಿ ಅಂಗಡಿಯಲ್ಲಿದ್ದ 200ರಿಂದ 300 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಇದಾದ ನಂತರ ಪೊಲೀಸರು ಕರೆದಿದ್ದಾರೆ ಎಂದು ನೇರವಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಜ್ಯುವೆಲ್ಲರಿ ಮಾಲೀಕ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಕಳ್ಳತನ ಮಾಡಿರುವುದು ನಕಲಿ ಪೊಲೀಸರು ಎಂಬುದು ಬೆಳಕಿಗೆ ಬಂದಿದೆ.
ಈ ಸಂಬಂಧ ಖದೀಮರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಲೀಕ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಬಂದು ಹೋಗಿದ್ದ ಕಾರ್ ನಂಬರ್ ಸುಳಿವಿನ ಮೇರೆಗೆ ನಾಗಮಂಗಲ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಖದೀಮರು ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.