ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶ ಮೂಲದ ಜಮಾಲ್ ಮತ್ತು ಅಜೀಂ ಬಂಧಿತರು. ಲೈಂಗಿಕ ದೌರ್ಜನ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಂಧನ ಭೀತಿಯಿಂದ ಆರೋಪಿಗಳು ನಗರದಿಂದ ಕಣ್ಮರೆಯಾಗಿದ್ದರು. ಆರೋಪಿಗಳ ಇರುವಿಕೆ ಜಾಡು ಪತ್ತೆ ಹಚ್ಚಿದ್ದ ಪೊಲೀಸರು, ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶಕ್ಕೆ ಹೋಗಲು ತಯಾರಿ ನಡೆಸಿದ್ದರ ಕುರಿತು ಮಾಹಿತಿ ಅರಿತು, ಕಾರ್ಯಾಚರಣೆ ನಡೆಸಿ ಗಡಿಭಾಗದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಬಂಧನ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಶೋಬಜ್ ಮತ್ತು ರುಪ್ಸನಾ ಹಾಗೂ ದಾಲೀಮ್ ದಂಪತಿಯನ್ನು ವಿಚಾರಣೆ ನಡೆಸಿದಾಗ ಜಮಾಲ್ ಮತ್ತು ಅಜೀಂ ಬಗ್ಗೆ ಬಾಯ್ಬಿಟ್ಟಿದ್ದರು. ಅಕ್ರಮವಾಗಿ ಭಾರತಕ್ಕೆ ಬಂದಿರುವ ಆರೋಪಿಗಳು ಹೈದರಾಬಾದ್, ಚೆನ್ನೈನಲ್ಲಿ ಕೆಲ ದಿನಗಳ ಕಾಲ ಕೆಲಸ ಮಾಡಿಕೊಂಡಿದ್ದು, ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಸಂತ್ರಸ್ತೆ ಹಾಗೂ ಶೋಬಜ್ ಸೇರಿಕೊಂಡು ಬೇರೆ ಬೇರೆ ರೀತಿಯ ವ್ಯವಹಾರಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಓದಿ..ಗ್ಯಾಂಗ್ ರೇಪ್ ವಿಡಿಯೋ ವೈರಲ್ ಬೆನ್ನಲ್ಲೇ ಬಯಲಾಯ್ತು ಸ್ಫೋಟಕ ವಿಷ್ಯ.. ಬಾಂಗ್ಲಾ ಪೊಲೀಸರು ಅಲರ್ಟ್