ಬೆಂಗಳೂರು: ಬಿಜೆಪಿಯವರು 13 ಸ್ಥಾನಗಳಲ್ಲಷ್ಟೇ ಅಲ್ಲ, 15 ಕ್ಷೇತ್ರದಲ್ಲೂ ಗೆಲ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ರು.
ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ 15 ಕ್ಷೇತ್ರಗಳ ಪೈಕಿ 13ರಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಬರೇ 13 ಸ್ಥಾನ ಎಂದು ಹೇಳಿದ್ಯಾರು? ಇನ್ನುಳಿದ ಇಬ್ಬರಿಗೆ ಅವರು ಮೋಸ ಮಾಡಬಾರದು ಅಲ್ವಾ? ಹಾಗಾಗಿ 15 ಸ್ಥಾನಗಳನ್ನು ಅವರು ಗೆಲ್ತಾರೆ. ಯಡಿಯೂರಪ್ಪ ಅವರ ಹೇಳಿಕೆ ಭ್ರಮೆ. 15 ಜನರನ್ನೂ ಮಂತ್ರಿ ಮಾಡ್ತೀನಿ ಎಂದು ಹೇಳಿದ್ದಾರೆ, ಹಾಗೆಯೇ ಮಾಡಲಿ ಎಂದವರು ಹೇಳಿದ್ರು.
ಕನಕಪುರಕ್ಕೆ ಮೆಡಿಕಲ್ ಕಾಲೇಜು ರದ್ದು ಆದೇಶ ವಾಪಸ್ ಪಡೆದು, ಕಾಲೇಜು ಸ್ಥಾಪನೆಗೆ ಅವಕಾಶ ಮಾಡಿ ಕೊಡಿ ಎಂದು ಸಿಎಂಗೆ ಪತ್ರ ಬರೆದಿದ್ದೇನೆ. ಸಿಎಂ ಈ ವಿಚಾರದಲ್ಲಿ ಕೈಗೊಂಡ ನಿರ್ಧಾರ ಸರಿಯಲ್ಲ. ನಾವೂ ರಾಜಕಾರಣದಲ್ಲಿದ್ದೇವೆ, ನಮಗೂ ಹೋರಾಟ ಮಾಡೋದು ಗೊತ್ತಿದೆ. ಹೋರಾಟಕ್ಕೆ ಸಾವಿರಾರು ಜನ ಬೇಕಿಲ್ಲ. ಒಂದಿಬ್ಬರು ಎಂಎಲ್ಸಿಗಳಿದ್ದಾರೆ ಇದ್ದಾರೆ, ಅಷ್ಟು ಸಾಕು! ಕಾಲೇಜು ನಾಳೆ ಬೆಳಗ್ಗೆ ಕಟ್ಟಿ ಮುಗಿಯುವುದಲ್ಲ. ಆದರೂ ಆವರು ಮಾಡಿದ್ದು ಸರಿ ಅಲ್ಲ. ಅವರಿಗೆ ಜ್ಞಾನೋದಯ ಆಗುತ್ತೆ ಅಂದುಕೊಂಡಿದ್ದೇನೆ. ನಾನು ಹೇಗೆ ಹೋರಾಟ ಮಾಡುತ್ತೇನೆ. ವಿಧಾನಸೌಧದ ಹೊರಗೂ ಅಥವಾ ಒಳಗೂ ಕಾದು ನೋಡಿ ಎಂದು ಅವರು ಸರ್ಕಾರವನ್ನು ಎಚ್ಚರಿಸಿದರು.
ಬಿಜೆಪಿಯ ಅಶ್ವತ್ಥ ನಾರಾಯಣ ಈ ಬಾರಿ ಕ್ಲೀನ್ ಸ್ವೀಪ್ ಮಾಡ್ತೇವೆ ಅನ್ನೋ ವಿಚಾರ ಪ್ರಸ್ತಾಪಿಸಿ, ಕ್ಲೀನಿಂಗ್ ಕೆಲಸ ಮಾಡೋದು ಒಳ್ಳೆಯದು. ದೇವೇಗೌಡರು ಹಿಂದೆ ಪ್ರಧಾನಿಯಾಗಿದ್ದರು. ಕುಮಾರಸ್ವಾಮಿ, ನಾನು, ಸಿಂಧ್ಯಾ ಎಲ್ಲರೂ ಅಲ್ಲಿಂದಲೇ ಪ್ರತಿನಿಧಿಸಿದ್ದೆವು. ನಮ್ಮಿಂದ ಆಗದೇ ಇರೋ ಕೆಲಸ ಇವರಿಂದಾಗಲಿ. ಅಶ್ವಥ ನಾರಾಯಣ ಬಹಳ ಉತ್ಸಾಹದಿಂದಿದ್ದಾರೆ. ಅವರ ಉತ್ಸಾಹಕ್ಕೆ ನಾವ್ಯಾಕೆ ಬೇಡ ಅನ್ನೋಣ. ಮಾಡಲಿ, ಐ ವಿಷ್ ಹಿಮ್ ಆಲ್ ದಿ ಬೆಸ್ಟ್ ಎಂದರು.
ಚಿದಂಬರಂ ಭೇಟಿ ವಿಚಾರ ಪ್ರಸ್ತಾಪಿಸಿ, ಚಿದಂಬರಂ ಹಾಗೂ ನಾನು ಅನುಭವಿಸಿದ ನೋವು ನಮಗೆ ಗೊತ್ತಿದೆ. ಮುಂದೆ ಅದೆಲ್ಲವೂ ದಾಖಲಾಗುವ ಹಾಗೆ ಮಾತಾಡುತ್ತೇನೆ. ನಮ್ಮನ್ನು ಅಲ್ಲಿ ಭೇಟಿ ಮಾಡುವುದಕ್ಕೂ ಬಿಡುತ್ತಿರಲಿಲ್ಲ. ನಮಗೆ ಕಾನೂನಿನ ಕೆಲವು ವಿಚಾರ ಮಾತಾಡುವುದಿತ್ತು, ಮಾತಾಡಿದ್ದೆವು. ಮುಂದಿನ ರಾಜಕೀಯದ ಹೋರಾಟ ಬಗ್ಗೆ ಮಾತಾಡಿದ್ದೇವೆ ಎಂದರು.
ಉನ್ನಾವೋ ಪ್ರಕರಣ ಸಂಬಂಧಿಸಿ ಪ್ರತಿಕ್ರಿಯಿಸಿ, ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಈ ಬಗ್ಗೆ ಹೋರಾಟ ಮಾಡಿದ್ದಾರೆ. ಯಾವುದೇ ಸರ್ಕಾರ ಇರಲಿ, ಇದು ಅದರ ಗೌರವದ ಪ್ರಶ್ನೆ. ಮಹಿಳೆಯರನ್ನು ಕಾಪಾಡಬೇಕಾಗಿರುವುದು ನಮ್ಮ ಕರ್ತವ್ಯ. ಈ ವಿಚಾರದಲ್ಲಿ ಬಿಜೆಪಿ ಸೋತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ರು.