ಬೆಂಗಳೂರು : ರಾಷ್ಟ್ರೀಯ ರೈತ ಮುಖಂಡರ ರಾಷ್ಟ್ರೀಯ ದುಂಡು ಮೇಜಿನ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಗರದ ಗಾಂಧಿಭವನದಲ್ಲಿ ಅಧಿವೇಶನ ನಡೆಯಿತು. ಸಭೆಯಲ್ಲಿ ನವೆಂಬರ್ 26 ರಂದು ಸಿಂಗು ಬಾರ್ಡರ್ ನಲ್ಲಿ ರೈತರ ಧರಣಿ ಸತ್ಯಾಗ್ರಹ ಮತ್ತು ನಾಳೆ ರಾಜಧಾನಿಯಲ್ಲಿ ವಿಧಾನಸೌಧ ಚಲೋ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ವಿಧಾನಸೌಧ ಚಲೋ ಮತ್ತು ಸಿಂಗೂ ಬಾರ್ಡರ್ ನಲ್ಲಿ ಧರಣಿ ಸತ್ಯಾಗ್ರಹ : ಅಧಿವೇಶನದ ನಂತರ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ ಗ್ಯಾರೆಂಟಿ ಕಾನೂನು ಜಾರಿ ಮಾಡುತ್ತೇವೆ. ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಲು ಸಮಿತಿ ರಚಿಸಿದ್ದೇವೆ ಎಂದು ಸರ್ಕಾರದ ಕೃಪಾಪೋಷಿತ ಸಮಿತಿ ತಿಳಿಸಿದೆ. ಆದರೆ ವರ್ಷಗಳ ಕಾಲ ಹೋರಾಟ ಮಾಡಿದ, ರೈತ ಮುಖಂಡರ ಹೊರಗಿಟ್ಟು ಸಮಿತಿ ರಚಿಸಿ ನಾಟಕವಾಡುತ್ತಿದ್ದಾರೆ. ಈ ಸಮಿತಿಯ ನಿರ್ಧಾರಗಳನ್ನು ತಿರಸ್ಕರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದಕಾರಣ ದೇಶಾದ್ಯಂತ ರೈತ ಚಳವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ಮುಂದಾಗೋಣ ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯ : ಎಲ್ಲಾ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಎಂ.ಎಸ್.ಪಿ ಖಾತರಿ ಕಾನೂನು ಜಾರಿಗೆ ತರಬೇಕು. ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. 2022ರ ವಿದ್ಯುತ್ ಕಾಯ್ದೆ ಖಾಸಗೀಕರಣ ತಿದ್ದುಪಡಿ ಕೈಬಿಡಬೇಕು. ಕಬ್ಬಿನ ಎಫ್.ಐ.ಆರ್.ಪಿ ದರ ಪುನರ್ ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ನ್ಯಾಯಯುತ ಕಬ್ಬಿನ ದರ ನಿಗದಿ ಮಾಡಬೇಕು ಎಂದು ಅಧಿವೇಶನದಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಜಿ ಎಸ್ ಟಿ ರದ್ದಿಗೆ ಆಗ್ರಹ : ಕೃಷಿ ಉತ್ಪನ್ನಗಳ, ಹಾಗೂ ಉಪಕರಣಗಳ ಮೇಲಿನ ಜಿ.ಎಸ್.ಟಿ ರದ್ದುಪಡಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಫಸಲ್ ಭೀಮಾ ಬೆಳೆ ವಿಮೆ ಯೋಜನೆ ಮಾನದಂಡ ಬದಲಾಯಿಸಬೇಕು. ವಿಶ್ವ ವ್ಯಾಪಾರ ಒಪ್ಪಂದ ಡಬ್ಲ್ಯುಟಿಒ ನಿಂದ ಭಾರತ ಸರ್ಕಾರ ಹೊರಬರಬೇಕು. ದೆಹಲಿ ಹೋರಾಟದಲ್ಲಿನ 750 ರೈತ ಕುಟುಂಬಗಳಿಗೆ ನೀಡಿರುವ ಪರಿಹಾರ ಭರವಸೆ ಈಡೇರಿಸಬೇಕು. ದೆಹಲಿ ಹೋರಾಟದಲ್ಲಿ ರೈತರ ಮೇಲೆ ದಾಖಲಾಗಿರುವ ಪೊಲೀಸ್ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎನ್ನುವ ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಂಡು ದೇಶಾದ್ಯಂತ ಹೋರಾಟ ನಡೆಸಲು ತೀರ್ಮಾನ ಮಾಡಲಾಯಿತು ಎಂದು ಹೇಳಿದರು.
ಹಲವು ರಾಜ್ಯಗಳ ರೈತ ಮುಖಂಡರು ಭಾಗಿ : ಮಾಧ್ಯಮಗೋಷ್ಟಿಯಲ್ಲಿ ಪಂಜಾಬ್ ರೈತ ಮುಖಂಡ ಜಗಜೀತಸಿಂಗ್ ದಲ್ಲೇವಾಲ, ಮಧ್ಯ ಪ್ರದೇಶದಿಂದ ಶಿವಕುಮಾರ ಕಕ್ಕಾಜಿ, ತಮಿಳುನಾಡಿನ ದೈವಸಿಗಾಮಣಿ, ಕೇರಳದಿಂದ ಕೆ.ವಿ ಬಿಜು, ಹರಿಯಾಣದ ಅಭಿಮನ್ಯುಕೊಹಾರ, ತಮಿಳುನಾಡಿನ ರಾಮನ ಗೌಂಡರ್, ಉತ್ತರ ಪ್ರದೇಶದಿಂದ ಸೇವಾಸಿಂಗ್, ಒಡಿಶಾದಿಂದ ಸಚಿನ್ ಮಹಾಪಾತ್ರ, ಮಹಾರಾಷ್ಟ್ರದಿಂದ ಶಂಕರ ಧರೀಕರ್, ಗುಜರಾತ್ ನ ಜೆ.ಕೆ ಪಟೇಲ್, ಹರಿಯಾಣದ ಬಲದೇವಸಿಂಗ್ ಸಿರ್ಸಾ, ತೆಲಂಗಾಣದ ವೆಂಕಟೇಶ್ವರ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು. ಇನ್ನು, ಮುಂತಾದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ರೈತ ಮುಖಂಡರು ಭಾಗವಹಿಸಿದ್ದು, ನಾಳೆ ಕರ್ನಾಟಕದ ರೈತರ ರ್ಯಾಲಿಯಲ್ಲಿ ಭಾಗವಹಿಸಲು ತೀರ್ಮಾನಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿ ಮೋಡ ಕವಿದ ವಾತಾವರಣ, ಸಾಮಾನ್ಯ ಮಳೆ: ಹವಾಮಾನ ಇಲಾಖೆ