ಆನೇಕಲ್: ಐಎಂಎ ಬಹುಕೋಟಿ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಹತ್ವದ ಬೆಳವಣಿಗೆಯಲ್ಲಿ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ರೋಷನ್ ಬೇಗ್ ರನ್ನು ಬಂಧಿಸಿದ್ದಾರೆ. ಸದ್ಯ ಬೇಗ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕಳೆದ ಒಂದು ವರ್ಷದಿಂದ ಸಿಬಿಐ ವಿಚಾರಣೆಗೆ ಹಾಜರಾಗುತ್ತಿದ್ದ ರೋಷನ್ ಬೇಗ್ ನಿನ್ನೆ ಬೆಳಗ್ಗೆ ಸಿಬಿಐ ವಿಚಾರಣೆಗೆ ಹಾಜರಾಗಿದ್ದರು. ಸಂಜೆ 4 ಗಂಟೆ ಹೊತ್ತಿಗೆ ರೋಷನ್ ಬೇಗ್ ಬಂಧಿಸಲಾಯಿತು.
14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಕೋರ್ಟ್ ಆದೇಶದಂತೆ ಸಿಬಿಐ ಅಧಿಕಾರಿಗಳು ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ರವಾನೆ ಮಾಡಿದ್ದಾರೆ. ಹೀಗೆ ಅನಿರೀಕ್ಷಿತವಾಗಿ ಸಿಬಿಐ ಅಧಿಕಾರಿಗಳು ರೋಷನ್ ಬೇಗ್ ರನ್ನು ಜೈಲಿಗೆ ಕಳುಹಿಸಿದ್ದು, ರೋಷನ್ ಬೇಗ್ ಅವರ ಆಪ್ತರ ಆತಂಕಕ್ಕೆ ಕಾರಣವಾಗಿದೆ.
ರೋಷನ್ ಬೇಗ್ ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಬಿಪಿ, ಶುಗರ್ ಇದೆ. ಬೆಳಗ್ಗೆ ವಿಚಾರಣೆಗೆಂದು ಕರೆದೊಯ್ದಿದ್ದರು. ಯಾವಾಗಲೂ ಹೋಗುವ ಹಾಗೆ ವಿಚಾರಣೆಗೆ ರೋಷನ್ ಬೇಗ್ ಹಾಜರಾಗಿದ್ದರು. ಆದರೆ ಸಂಜೆ ಅರೆಸ್ಟ್ ಎಂದು ತೋರಿಸಿ ಜೈಲಿಗೆ ರವಾನೆ ಮಾಡಿದ್ದಾರೆ ಎಂದು ಆಪ್ತರು ತಿಳಿಸಿದ್ರು.