ಬೆಂಗಳೂರು: ಅಂತಾರಾಷ್ಟ್ರೀಯ, ದೇಶಿಯ ಸೇರಿದಂತೆ ಎಲ್ಲಾ ವಿಮಾನ ಸಂಚಾರವನ್ನು ರದ್ದುಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಇದರ ದುಷ್ಪರಿಣಾಮದ ಅರಿವು ಈಗ ತಿಳಿಯುತ್ತಿಲ್ಲ. ಮೊದಲನೇ ಅಲೆ ವ್ಯಾಪಕ ರೀತಿಯಲ್ಲಿ ಹರಡಿ ಆರ್ಥಿಕ ಸಂಕಷ್ಟ ತಂದೊಡ್ಡಿತ್ತು. ಇದೀಗ ಎರಡನೇ ಅಲೆ ಅದನ್ನು ಇನ್ನಷ್ಟು ಹೆಚ್ಚಿಸಿದರೆ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಲಿದೆ. ಹಾಗಾಗಿ ಸರ್ಕಾರಗಳು ಮುಂಚಿತವಾಗಿಯೇ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.
ಓದಿ : ನೈಟ್ ಕರ್ಫ್ಯೂಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ: ಈ ಸೇವೆಗಳಿಗೆ ಇಲ್ಲ ನಿರ್ಬಂಧ!
ಕಡ್ಡಾಯವಾಗಿ ಎಲ್ಲರಿಗೂ ಟೆಸ್ಟ್ ಮಾಡಿಸಬೇಕು. ಕೋವಿಡ್ ಸೋಂಕಿತರು ಕಡ್ಡಾಯವಾಗಿ ಐಸೋಲೇಶನ್ನಲ್ಲಿರಬೇಕು. ಎಲ್ಲೆಲ್ಲಿ ಜನ ಸಂಪರ್ಕ ಹೆಚ್ಚು ಇರುತ್ತೋ ಅಲ್ಲೆಲ್ಲಾ ಮಾಸ್ಕ್ ಹಾಕಿಕೊಳ್ಳಲು ಹೇಳಬೇಕು, ಸ್ಯಾನಿಟೈಸ್ ಮಾಡಿಸಬೇಕು. ಜನರು ಕೂಡ ಸರ್ಕಾರದ ನಿಯಮಕ್ಕೆ ಸಹಕಾರ ನೀಡಬೇಕು. ಆಗ ಮಾತ್ರ ನಾವು ಕೊರೊನಾವನ್ನು ಸಂಪೂರ್ಣವಾಗಿ ಹೊಡೆದೋಡಿಸಲು ಸಾಧ್ಯ ಎಂದು ಹೇಳಿದರು.