ಬೆಂಗಳೂರು: ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ದಿನದ ಆದಾಯ ನಂಬಿ ಬದುಕು ನಡೆಸುತ್ತಿದ್ದಾರೆ. ಅವರು ಪಡುವ ಕಷ್ಟ ಎಷ್ಟು ಎನ್ನುವುದರ ಬಗ್ಗೆ ಈಟಿವಿ ಭಾರತ್ ಇಂದು ಒಂದು ವ್ಯಾಪಾರಿಯ ದಿನಚರಿ ಗಮನಿಸಿದೆ.
ಬೀದಿ ಬದಿ ವ್ಯಾಪಾರಿಗಳು ಅಸಂಘಟಿತ ಕಾರ್ಮಿಕ ವರ್ಗದ 144 ವಿವಿಧ ಕಸುಬುವಿನ ಒಂದು ಭಾಗ. ಆಟೋ ಚಾಲಕರು, ಕ್ಯಾಬ್ ಚಾಲಕರು, ಪೌರಕಾರ್ಮಿಕರು, ರಸ್ತೆಯಲ್ಲಿ ಚಿಂದಿ ಆಯುವವರು ಅಸಂಘಟಿತ ಕಾರ್ಮಿಕರ ಪಾಲುದಾರರು. ಇವರು ತಮ್ಮ ದಿನದ ಆದಾಯ ನಂಬಿ ಹೇಗೆಲ್ಲ ಬದುಕುತ್ತಾರೆ ಎನ್ನುವುದನ್ನು ತರಕಾರಿ ವ್ಯಾಪಾರಿ ದೊಡ್ಡಣ್ಣ ಎಂಬ ಓರ್ವ ವ್ಯಾಪಾರಿ ಮೂಲಕ ವಿವರಿಸಲಾಗಿದೆ.
ನಾನು ಬೆಂಗಳೂರಿಗೆ ಬಂದು 34 ವರ್ಷಗಳಾಯಿತು. ಬೆಂಗಳೂರಿಗೆ ಬಂದಾಗ ಬಾಟಾ ಶೂ ಕಂಪನಿಯಲ್ಲಿ ಕೇವಲ 224 ರೂ.ಗಳ ಮಾಸಿಕ ವೇತನಕ್ಕೆ ಕೆಲಸ ಮಾಡಿದ್ದೆ. ಮದುವೆ ಆದ ಮೇಲೆ ತರಕಾರಿ ವ್ಯಾಪಾರವನ್ನು ಶುರು ಮಾಡಿದೆ. ಯಶವಂತಪುರದ ಆರ್ಎಂಸಿ ಯಾರ್ಡ್ನಿಂದ ತರಕಾರಿ ಖರೀದಿಸಿ, ದಿನಕ್ಕೆ ಸುಮಾರು 20 ಕಿ.ಮೀ. ಸಂಚರಿಸಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದೇನೆ.
ಈ ಹಿಂದೆ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರಿ ಗುರುತು ಇರಲಿಲ್ಲ. ಆದರೆ, ಈಗ ಬಡವರ ಬಂಧು ಯೋಜನೆಯಡಿ ಸಾಕಷ್ಟು ಉತ್ತಮ ಯೋಜನೆಗಳು ಬಂದಿವೆ. ಬೀದಿ ಬದಿ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಬಡ್ಡಿ ರಹಿತ ಸಾಲ ಕೊಡುವ ಮುಖಾಂತರ ಮೀಟರ್ ಬಡ್ಡಿಯ ಸುಳಿಯಿಂದ ಪಾರಾಗಲು ನೆರವಾಗಿದೆ.
ಬಡ್ಡಿ ರಹಿತ ಸಾಲದ ಜೊತೆ ಬೀದಿ ಬದಿಯ ವ್ಯಾಪಾರಿಗಳಿಗೆ ಗುರುತಿನ ಚೀಟಿಯನ್ನು ಸರ್ಕಾರ ಕೊಡುತ್ತಿದೆ. ಇದರಿಂದ ನಮ್ಮ ಅಸ್ತಿತ್ವಕ್ಕೆ ಬೆಲೆ ಬಂದಿದೆ. ಇಷ್ಟೆಲ್ಲಾ ಸರ್ಕಾರ ಸವಲತ್ತು ಕೊಟ್ಟರು ಸಹ ಸ್ಥಳೀಯ ಪೊಲೀಸರು, ಕೆಲ ಬಿಬಿಎಂಪಿ ಅಧಿಕಾರಿಗಳು ನಮ್ಮಂತವರಿಂದ ದುಡ್ಡು ವಸೂಲಿ ಮಾಡುವುದನ್ನು ನಿಲ್ಲಿಸಿಲ್ಲ ಎಂದು ನೊಂದುಕೊಳ್ಳುತ್ತಾರೆ ದೊಡ್ಡಣ್ಣ.
ಬೆಳಿಗ್ಗೆ 4ಕ್ಕೆ ನಮ್ಮಂತವರ ದಿನದ ಕಾಯಕ ಶುರುವಾದರೆ ರಾತ್ರಿ 10ಕ್ಕೆ ಮುಗಿಯುತ್ತದೆ. ಮುಂಜಾನೆ 4ಕ್ಕೆ ಯಾರ್ಡ್ಗೆ ಹೋಗಿ ತರಕಾರಿ ಕೊಂಡು ತಳ್ಳುವ ಗಾಡಿಗೆ ಜೋಡಿಸುತ್ತೇವೆ. ಸಾಮಾನ್ಯವಾಗಿ ಬೆಳಗ್ಗೆ ವ್ಯಾಪಾರ ಕಡಿಮೆ. ಆದರೆ, ಹೊತ್ತು ಕಳೆದೆಂತೆಲ್ಲ ಸ್ವಲ್ಪ ಜೋರಾಗುತ್ತದೆ. ಬೆಳಿಗ್ಗೆ ಸಹಜವಾಗಿ ಕೆಲವು ಸಣ್ಣ ಹೋಟೆಲ್ಗಳು ಹಾಗೂ ಕೆಲವು ಮಹಿಳೆಯರು ಬಂದು ತರಕಾರಿ ಕೊಳ್ಳುತ್ತಾರೆ. ನಂತರ ಕೆಲಸ ಮುಗಿಸಿ ಸಂಜೆಯ ವೇಳೆಗೆ ಮನೆಗೆ ಹೋಗುವ ಸಂದರ್ಭದಲ್ಲಿ ಮನೆಗೆ ತರಕಾರಿ ಖರೀದಿಸುವುದು ಹೊಸ ಟ್ರೆಂಡ್ ಆಗಿಬಿಟ್ಟಿದೆ. ಇನ್ನು ನಾನು ದಿನಕ್ಕೆ 5000 ರೂ. ವಹಿವಾಟು ನಡೆಸುತ್ತೇನೆ. ಆದರೆ, ಲಾಭ ಉಳಿಯುವುದು ಕೇವಲ 600 ರೂ.ಗಳು ಮಾತ್ರ.
ಇದಲ್ಲದೆ ನನ್ನಂತೆ ಸಾಕಷ್ಟು ಬೀದಿ ಬದಿ ವ್ಯಾಪಾರಿಗಳು ಕಚ್ಚಾ ಮನೆಯಲ್ಲಿ ವಾಸವಾಗಿದ್ದಾರೆ. ಇಂತವರಿಗೆ ಸರ್ಕಾರ ಮನೆ ಮಾಡಿಕೊಟ್ಟರೆ ಅನುಕೂಲವಾಗುತ್ತದೆ. ನಮ್ಮ ಮಕ್ಕಳು ನಮ್ಮಂತೆ ಬೀದಿ ಬದಿ ವ್ಯಾಪಾರಿಗಳು ಆಗಬಾರದು ಎನ್ನುತ್ತಾರೆ ತರಕಾರಿ ವ್ಯಾಪಾರಿ ದೊಡ್ಡಣ್ಣ.