ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಹಿರಿಯ ಅಧಿಕಾರಿಗಳು ಆರೋಪಿಗಳನ್ನ ಮಟ್ಟ ಹಾಕಲು ಹರಸಾಹಸ ಪಡುತ್ತಿದ್ದಾರೆ.
ಆರೋಪಿಗಳು ರವಾನೆ ಮಾಡಿರುವ ವಾಟ್ಸ್ಆ್ಯಪ್ ಸಂದೇಶಗಳು ಪೊಲೀಸರಿಗೆ ದೊರಕಿದ್ದು, ತನಿಖೆಗೆ ಇದು ಪೂರಕವಾಗಿದೆ. ಇನ್ನು ವಾಟ್ಸ್ಆ್ಯಪ್ ಸಂದೇಶ ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಕಾರಣ, ಅಲ್ಲಿದ್ದ ಮೆಸೇಜ್. ಗಲಭೆ ನಡೆಸಿ ಬಳಿಕ ಮಹಿಳೆಯರನ್ನು ಮುಂದೆ ಬಿಟ್ಟು, ಈ ಕೃತ್ಯ ಎಸಗಿದ್ದು, ಅವರೇ ಎಂಬಂತೆ ಬಿಂಬಿಸಲು ಪ್ಲಾನ್ ನಡೆದಿತ್ತು. ಅಷ್ಟೇ ಅಲ್ಲದೇ, ಒಂದು ವೇಳೆ ಮಹಿಳೆಯರ ಮೇಲೆ ಹಲ್ಲೆಯಾದರೆ ಕಾನೂನಿನ ಮೂಲಕ ಹೋರಾಟ ಮಾಡಿ , ತದನಂತರ ಮಾನವ ಹಕ್ಕುಗಳ ಆಯೋಗಕ್ಕೆ ಹೋಗಬಹುದು. ಪೊಲೀಸರು ಮಾನವ ಹಕ್ಕು ಆಯೋಗಕ್ಕೆ ಹೆದರುತ್ತಾರೆ. ತಲೆ ಕೆಡಿಸಿಕೊಳ್ಳಬೇಡಿ. ಬಂಧಿಸಲು ಬಂದಾಗ ಗಲಭೆ ಎಬ್ಬಿಸಿ ಎಂದು ವಾಟ್ಸ್ಆ್ಯಪ್ ಮೆಸೇಜ್ನಲ್ಲಿ ಸೂಚನೆ ನೀಡಲಾಗಿತ್ತು.
ಈ ಮೆಸೇಜ್ಗಳು ಸಿಸಿಬಿ ತನಿಖೆಗೆ ಸಹಕಾರಿಯಾಗಿದ್ದು, ಯಾವ ನಂಬರ್ನಿಂದ ಮೆಸೇಜ್ ಹೋಗಿದೆ. ಇದರ ಲೀಡ್ ಯಾರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಬಹುತೇಕ ಮನೆಗೆ ಬೀಗ; ಒಳಗೆ ರಿಂಗ್ ಟೋನ್ ಸೌಂಡ್..!
ಇನ್ನು ಆರೋಪಿಗಳ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಮಟ್ಟ ಹಾಕಲು ತೆರಳುವಾಗ ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಆದರೆ, ಮನೆಯ ಒಳಗಡೆ ಇದ್ದು ಹೊರಗಡೆ ಬೀಗ ಹಾಕಿ ನಾಟಕ ಮಾಡ್ತಿದ್ದಾರೆ. ಸದ್ಯ ಈ ವಿಚಾರ ಸಿಸಿಬಿಗೆ ತಿಳಿದು, ಮನೆಗಳ ಬಾಗಿಲು ಒಡೆದು ಕಾರ್ಯಾಚರಣೆಗೆ ಇಳಿದಿದ್ದಾರೆ. ಪ್ರಮುಖ ಆರೋಪಿ ವಾಜಿದ್ ಪಾಷಾನನ್ನು ಬಂಧಿಸಲು ತೆರಳಿದ್ದಾಗ ಇದೇ ಘಟನೆ ನಡೆದಿತ್ತು. ಮನೆ ಹೊರಗಡೆಯಿಂದ ಬೀಗ ಹಾಕಿದ್ದ ಪಾಷಾ, ಪೊಲೀಸರು ಬಂದಾಗ ಅಡಗಿ ಕುಳಿತುಕೊಂಡಿದ್ದ. ಇನ್ನು ಬೀಗ ನೋಡಿ ಸುಮ್ಮನಾದ ಪೊಲೀಸರು, ಆತನಿಗೆ ಫೋನ್ ಮಾಡಿದ್ದಾರೆ. ಆಗ ಮನೆಯೊಳಗಡೆಯಿಂದ ರಿಂಗ್ ಆಗಿದ್ದು, ಪಾಷಾಗೆ ವಾರ್ನ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಬಂದು ಪೊಲೀಸರಿಗೆ ಶರಣಾಗಿದ್ದ.
ಇನ್ನು ಗಲಭೆ ಪ್ರಕರಣ ಸಿಸಿಬಿಗೆ ಹಸ್ತಾಂತರಿಸಿದ ಬಳಿಕ, ಗಲ್ಲಿ ಗಲ್ಲಿಗೆ ನುಗ್ಗಿ ಆರೋಪಿಗಳನ್ನ ಹಿಡಿದಿದ್ದೇ ರೋಚಕ ಕಥೆ. ಏಕೆಂದರೆ ಅಧಿಕಾರಿಗಳು ಒಟ್ಟಾಗಿ ಹೋಗಲು ಸಾಧ್ಯವಿರಲಿಲ್ಲ. ತಂಡಗಳಾಗಿ ಒಂದೊಂದು ಕಡೆ ಹೋಗಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಆದರೆ ಡಿಜೆ ಹಳ್ಳಿಯ ಗಲ್ಲಿಗೆ ಹೋದರೆ ಮತ್ತೆ ಗಲಭೆ ಏಳುವ ಭಯ. ಹೀಗಾಗಿ ಜನರ ಮಧ್ಯೆಯೇ ಬೆರತು, ಆರೋಪಿಗಳನ್ನ ಹಿಡಿದು ಅಧಿಕಾರಿಗಳು ಕರೆ ತಂದಿದ್ದಾರೆ.
ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿದ ಡಿಸಿಪಿ ರವಿಕುಮಾರ್ ತನಗೆ ಪರಿಚಯವಿರುವ ಮುಸ್ಲಿಂ ಸಮುದಾಯದ ವ್ಯಕ್ತಿಯೊರ್ವನ ಬುಲೆಟ್ ಬೈಕ್ ಪಡೆದು ಪ್ರಮುಖ ಆರೋಪಿ ನವೀನ್ ಮನೆಗೆ ತಲುಪಿದ್ದಾರೆ. ತದನಂತರ ಆರೋಪಿಯನ್ನ ಯಾರು ಗುರುತು ಹಿಡಿಯದಂತೆ, ಮುಖಕ್ಕೆ ಬಟ್ಟೆ ಸುತ್ತಿಸಿ ಮನೆಯಿಂದ ಹೊರ ಕರೆ ತಂದಿದ್ದಾರೆ.
ಸದ್ಯ ಘಟನೆಗೆ ಒಂದೊಂದು ಆಯಾಮ ಸಿಗುತ್ತಿದೆ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.