ಬೆಂಗಳೂರು: ನಿನ್ನೆ ಸಚಿವ ಸಂಪುಟ ವಿಸ್ತರಣೆಯಾದ ತಕ್ಷಣವೇ ಅಸಮಾಧಾನ, ಅತೃಪ್ತಿ, ಅಸಮತೋಲನ ಎಲ್ಲ ಮುಗಿದ ಅಧ್ಯಾಯ. ನಾನು ಮೌನವಾಗಿರಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ವಿಕಾಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಧ್ಯಾನ, ಯೋಗ, ಪ್ರಾಣಾಯಾಮ ಮಾಡುವವನು. ಹಾಗಾಗಿ ಮನಸ್ಸನ್ನು ಹತೋಟಿಯಲ್ಲಿಡುತ್ತೇನೆ. ಪ್ರಾದೇಶಿಕ ಅಸಮತೋಲನ ಸೇರಿ ಯಾವುದೇ ವ್ಯತ್ಯಾಸಗಳಿದ್ದರೂ ಅದನ್ನು ಸರಿಪಡಿಸಲು ಸಿಎಂ ಯಡಿಯೂರಪ್ಪನವರು ಸಮರ್ಥರಿದ್ದಾರೆ. ಯಾವ ಬಂಡಾಯವೂ ಇಲ್ಲ, ಭಿನ್ನಮತವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ರೆಬೆಲ್ ಆಗಿಲ್ಲ. ನಾನು ಮಾತನಾಡಿದರೆ ರೆಬೆಲ್ ಅಂತೀರಾ, ಸುಮ್ಮನಿದ್ದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಂಡಿದ್ದಾರೆ ಅಂತೀರಾ?. ನಾನು ಸ್ವಯಂ ಕಡಿವಾಣ ಹಾಕಿಕೊಂಡಿದ್ದೇನೆ ಅಷ್ಟೇ..
ನನ್ನನ್ನು ರಾಜಕೀಯವಾಗಿ ಬೆಳೆಸಿದವರೇ ಯಡಿಯೂರಪ್ಪನವರು. ಅವರ ತೀರ್ಮಾನಕ್ಕೆ ನಾನು ಬದ್ಧ. ಅವರು ನಮ್ಮನ್ನು ಮುಂದೆ ಬಿಟ್ಟು ಬಂಡಾಯ ಮಾಡಿಸುವ ಅಗತ್ಯವೇನಿಲ್ಲ. ಕೇಂದ್ರದ ವರಿಷ್ಠರ ಸೂಚನೆಯಂತೆ ಯಡಿಯೂರಪ್ಪನವರು ನಿರ್ಧಾರ ಕೈಗೊಳ್ಳಲು ಸಮರ್ಥರಿದ್ದಾರೆ ಎಂದು ಅಸಮಾಧಾನವಾಗಿರುವ ವಿಚಾರವನ್ನು ಅಲ್ಲಗಳೆದರು.
ಯಡಿಯೂರಪ್ಪನವರ ಆಡಳಿತ ಮತ್ತು ಸಚಿವ ಸಂಪುಟದಲ್ಲಿ ವಿಜಯೇಂದ್ರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅವರು ಯಡಿಯೂರಪ್ಪನವರ ಮಗ ಅಂತಲ್ಲ. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ. ಹಾಗಾಗಿ ಕೆಲ ಪ್ರಮುಖರು ಅವರನ್ನು ಭೇಟಿಯಾಗಿ ಮಾತನಾಡಿದರೆ ತಪ್ಪೇನು? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ವಿಜಯೇಂದ್ರ ಪಕ್ಷದಲ್ಲಿ ಬೆಳೆಯುತ್ತಿರುವ ಯುವ ಪ್ರತಿಭೆ. ನಮ್ಮ ಸಹೋದರನಿದ್ದಂತೆ.
ನಾವಾಗಿಯೇ ಅವರ ಬಳಿ ಹೋಗುತ್ತೇವೆ. ಅವರೇನು ಯಾರನ್ನೂ ಕರೆಯುವುದಿಲ್ಲ. ಜನರು ವಿಜಯೇಂದ್ರ ಬೆಳೆಯಬೇಕು ಎಂದು ಬಯಸುತ್ತಾರೆ. ಹಾಗಾಗಿ ಅವರೂ ಕೂಡ ರಾಜ್ಯ ಪ್ರವಾಸ ಮಾಡುತ್ತಾರೆ. ಆದರೆ, ಎಂದೂ ಕೂಡ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳಲ್ಲ. ವಿಜಯೇಂದ್ರ, ರಾಘವೇಂದ್ರ ಮಾತ್ರ ಯಡಿಯೂರಪ್ಪವರ ಮಕ್ಕಳಲ್ಲ. ನಾವೆಲ್ಲ ಯಡಿಯೂರಪ್ಪನವರ ಮಕ್ಕಳ ಸಮಾನವೇ ಎಂದರು.
ರಮೇಶ್ ಜಾರಕಿಹೊಳಿ ಸಜ್ಜನ ರಾಜಕಾರಣಿ, ಯೋಗ್ಯ ವ್ಯಕ್ತಿ. ಜನಾದೇಶ ಅವರ ಪರ ಬಂದಿದೆ. ಅವರು ಕಾಂಗ್ರೆಸ್ ಬಿಟ್ಟು ಬಂದಿದ್ದಾರೆ. ಹಾಗಾಗಿ ಆ ಪಕ್ಷದವರು ಏನು ಬೇಕಾದರೂ ಹೇಳಬಹುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.