ಬೆಂಗಳೂರು: 'ಏಕ್ ಲವ್ ಯಾ' ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಿರ್ದೇಶಕ ಪ್ರೇಮ್ ವಿಧಾನಸೌಧದಲ್ಲಿ ಧರಣಿನಿರತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸಿನೆಮಾ ಪ್ರಿವ್ಯೂಗೆ ಆಹ್ವಾನ ನೀಡಿದರು.
ಬಳಿಕ ಮಾತನಾಡಿದ ಅವರು, ಫೆ. 24ರಂದು 'ಏಕ್ ಲವ್ ಯಾ' ಸಿನಿಮಾ ಬಿಡುಗಡೆ ಆಗುತ್ತಿದೆ. ಕೋವಿಡ್ ನಿಯಂತ್ರಣದ ಬಳಿಕ ಸಿನೆಮಾ ಮಂದಿರಗಳಲ್ಲಿ ಎಲ್ಲರಿಗೆ ಅವಕಾಶ ನೀಡಲಾಗುತ್ತಿದೆ. ಇದು ನನ್ನ ದೊಡ್ಡ ಬಜೆಟ್ ಚಿತ್ರ. ಹಾಗಾಗಿ ಪ್ರಮುಖರನ್ನು ಭೇಟಿ ಮಾಡಿದ್ದೇನೆ. ಸಿನಿಮಾ ಪ್ರೀವ್ಯೂಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನೂ ಆಹ್ವಾನಿಸಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿದ ಹಿನ್ನೆಲೆ : ಪ್ರಾಂಶುಪಾಲರಿಗೆ ಕಿಡಿಗೇಡಿಗಳಿಂದ ಕೊಲೆ ಬೆದರಿಕೆ
ಇದೇ ವೇಳೆ ರಾಜಕೀಯಕ್ಕೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯಕ್ಕೆ ಬರುವ ಆಸೆಯಿಲ್ಲ. ನನಗೆ ರಾಜಕೀಯ ಪ್ರಮುಖರಲ್ಲಿ ಹಲವರು ಸ್ನೇಹಿತರಿದ್ದಾರೆ. ಹಿರಿಯರು, ಗುರುಗಳು ಇದ್ದಾರೆ. ಎಲ್ಲ ಪಕ್ಷಗಳಲ್ಲೂ ನನಗೆ ಹತ್ತಿರದವರಿದ್ದಾರೆ. ಚುನಾವಣೆಗೆ ನಿಲ್ಲದಿದ್ರೂ ಕೆಲಸ ಮಾಡುತ್ತೇವೆ. ನಮ್ಮ ತಾಯಿ ಹೆಸರಲ್ಲಿ ಟ್ರಸ್ಟ್ ಮಾಡಿದ್ದೇನೆ. ಮಂಡ್ಯದಲ್ಲಿ ಪ್ರೇಮ್ ಚುನಾವಣೆಗೆ ನಿಲ್ತಾನೆ ಅಂತಾರೆ. ಅಣ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರು ಇದ್ದಾಗ ಆಸೆಯಿತ್ತು. ಪ್ರೇಮ್ ಅಂದ್ರೆ ರೈತನ ಮಗ, ಒಳ್ಳೆಯವನು ಎಂಬ ಮಾತಿದೆ ಎಂದು ತಿಳಿಸಿದರು.
ರಕ್ಷಿತಾ ರಾಜಕೀಯಕ್ಕೆ ಕಣದಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅವರು, ಅವರು ಮೊದಲಿನಿಂದ ಬಿಜೆಪಿಯಲ್ಲಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಹೇಳಿದರು.