ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ ಪರವಾನಗಿ ರದ್ದುಪಡಿಸುವಂತೆ ಆರ್ಥಿಕ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಈ ಹಿಂದೆಯೇ ಟರ್ಫ್ ಕ್ಲಬ್ನಲ್ಲಿ ರೇಸಿಂಗ್ ನಿಲ್ಲಿಸಬೇಕು ಅಂತ ಸೂಚನೆ ನೀಡಿದ್ದೆವು. ಡಿ. 2ಕ್ಕೆ ರೇಸಿಂಗ್ ಅಂತ್ಯ ಮಾಡಬೇಕು ಎಂದು ಡೆಡ್ ಲೈನ್ ಕೊಟ್ಟಿದ್ದೆವು. ಆದರೆ ತಾಂತ್ರಿಕ ಕಾರಣಗಳಿಂದ ಇದು ಸಾಧ್ಯ ಆಗಿರಲಿಲ್ಲ ಎಂದು ವಿವರಿಸಿದರು.
ಈ ಹಿಂದೆಯೇ ಟರ್ಫ್ ಕ್ಲಬ್ ಸಂಬಂಧ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶನ ನೀಡಿದೆ. ಅದಾಗ್ಯೂ ಆರ್ಥಿಕ ಇಲಾಖೆ 10 ವರ್ಷದಿಂದ ಟರ್ಫ್ ಕ್ಲಬ್ ಪರವಾನಗಿ ನವೀಕರಣ ಮಾಡುತ್ತಲೇ ಬಂದಿದೆ. ನವೀಕರಣ ಅಥವಾ ಹೊಸ ಲೈಸನ್ಸ್ ಕೊಡುವುದು ಯಥಾಸ್ಥಿತಿಗೆ ವಿರುದ್ಧವಾದ ಕ್ರಮ. ಆರ್ಥಿಕ ಇಲಾಖೆಯ ಪರವಾನಗಿ ನವೀಕರಣ ಕ್ರಮ ನಿಯಮ ಬಾಹಿರವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ರೇಸ್ ಕೋರ್ಸ್ ಪರವಾನಗಿ ಕಾಯ್ದೆ ಪ್ರಕಾರ ನಿಯಮ ಉಲ್ಲಂಘನೆ ಮಾಡಿದ ಕ್ಲಬ್ನ ಪರವಾನಗಿಯನ್ನು ರದ್ದು ಮಾಡುವ ಅಧಿಕಾರ ಸರ್ಕಾರ ಹೊಂದಿದೆ. ಅದರಂತೆ ಕೂಡಲೇ ಪರವಾನಗಿ ರದ್ದುಗೊಳಿಸುವಂತೆ ಸಭೆಯಲ್ಲಿ ನಿರ್ದೇಶನ ನೀಡಿದ್ದೇವೆ. ಆರ್ಥಿಕ ಇಲಾಖೆ ಅಧಿಕಾರಿಗಳು ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಹೀಗಾಗಿ ಕೂಡಲೇ ಪರವಾನಗಿಯನ್ನು ರದ್ದು ಮಾಡಬೇಕು. ಕುದುರೆ ರೇಸ್ಗೆ ಆರ್ಥಿಕ ಇಲಾಖೆ ಲೈಸನ್ಸ್ ನೀಡುತ್ತಾ ಬಂದಿತ್ತು. ಈಗ ಲೈಸನ್ಸ್ ರದ್ದು ಮಾಡಬೇಕು ಅಂತ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ಇದಕ್ಕೆ ಎರಡು ದಿನಗಳಲ್ಲಿ ಸಿಎಂ ಸಹ ಅನುಮೋದನೆ ನೀಡುವ ಭರವಸೆ ಇದೆ ಎಂದರು.
ಇನ್ನು ಬಿಡಿಎಯಲ್ಲಿನ ಠೇವಣಿ ಹಣವನ್ನು ಅಕ್ರಮವಾಗಿ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಿದ ವಿಚಾರವಾಗಿಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಬಿಡಿಎ 3000 ಕೋಟಿ ರೂ.ಗಳನ್ನು ಅಕ್ರಮವಾಗಿ, ಅನಧಿಕೃತವಾಗಿ ಮ್ಯೂಚುವಲ್ ಫಂಡ್ನಲ್ಲಿ ತೊಡಗಿಸಿದೆ. 1999-2014ರ ತನಕ ಈ ಹಣವನ್ನು ತೊಡಗಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಚಾರ್ಜ್ ಶೀಟನ್ನೂ ಸಲ್ಲಿಸಲಾಗಿದೆ. ಆದರೆ, ತನಿಖೆ ಸಮರ್ಪಕವಾಗಿ ನಡೆಯದ ಕಾರಣ ಗೃಹ ಕಾರ್ಯದರ್ಶಿ ಮರು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.