ಬೆಂಗಳೂರು: ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಸಹ ಡಿಜಿಟಲೀಕರಣ ಅಳವಡಿಕೆ ಕುರಿತು ಇಂದು ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಡಿಜಿಟಲೀಕರಣ ಅಳವಡಿಸಿಕೊಳ್ಳುವ ಕೆಲಸ ಆಗುತ್ತಿದೆ. ಸ್ಕಾಲರ್ಶಿಪ್ ಹಣ ವಿದ್ಯಾರ್ಥಿಗಳ ಖಾತೆಗೆ ವ್ಯವಸ್ಥಿತವಾಗಿ ತಲುಪಬೇಕು. ಡಿಜಿ ಲಾಕರ್ ಮೂಲಕ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಬಹುದು. ಎಲ್ಲಾ ನಾಗರಿಕರಿಗೆ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಟಿಸಿ, ಮಾರ್ಕ್ಸ್ಕಾರ್ಡ್ ಸೇರಿ ಎಲ್ಲ ದಾಖಲೆಗಳನ್ನು ಇದರಲ್ಲಿ ಅಪ್ಲೋಡ್ ಮಾಡಬಹುದು.
ಯಾವುದೇ ಮಧ್ಯವರ್ತಿಗಳಿಲ್ಲದೆ ಆಧಾರ್ ಲಿಂಕ್ ಮೂಲಕ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮೊತ್ತ ತಲುಪಲಿದೆ. ಎಸ್ಎಸ್ಎಲ್ಸಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ಎಲ್ಲಾ ವಿಧದ ಪ್ರಮಾಣಪತ್ರಗಳನ್ನು ಡಿಜಿಟಲೀಕರಣದ ಮೂಲಕ ತಲುಪಿಸುವ ಕಾರ್ಯ ಮಾಡಲಿದ್ದೇವೆ. ಇದುವರೆಗೂ ಕೇವಲ ಎರಡು ದಾಖಲೆ ಮಾತ್ರ ಡಿಜಿಟಲ್ ಸೌಲಭ್ಯಕ್ಕೆ ಅಳವಡಿಕೆ ಆಗಿತ್ತು. ಮುಂದಿನ ಐದು ತಿಂಗಳಲ್ಲಿ ಕ್ಷಿಪ್ರಗತಿಯ ಕಾರ್ಯ ಕೈಗೊಂಡು ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯವಾಗಲಿದೆ ಎಂದರು.