ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನಪರ ಆಡಳಿತ, ಜನಹಿತ ಕಾರ್ಯಕ್ರಮಗಳು ಹಾಗೂ ಸರ್ಕಾರದ ಸಾಧನೆಗಳಿಗೆ ಮತದಾರರು ಮನ್ನಣೆ ನೀಡಿ, ರಾಜ್ಯದ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಭೂತಪೂರ್ವವಾಗಿ ಜಯಶೀಲರನ್ನಾಗಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದ್ದಾರೆ.
ಸಿಎಂ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜೇಶ್ ಗೌಡ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಗೆಲುವಿಗೆ ಕಾರಣೀಭೂತರಾದ ಕಾರ್ಯಕರ್ತರಿಗೆ, ಮತದಾರರಿಗೆ ಹಾಗೂ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದೆ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ಕೆ ತಮ್ಮನ್ನು ನಿಯೋಜಿಸಿದ್ದರು. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ನಾವೆಲ್ಲರೂ ಸಂಘಟಿತವಾಗಿ ಚುನಾವಣಾ ಕಾರ್ಯನಿರ್ವಹಿಸಿದೆವು. ಜನತೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ, ಸಾಧನೆಗೆ ಮನ್ನಣೆ ನೀಡಿ, ಅಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿಸಿದ್ದಾರೆ. ಎಲ್ಲಾ ಮತದಾರರಿಗೆ, ಕಾರ್ಯಕರ್ತರಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು.
ಜನತೆ ಅಭಿವೃದ್ಧಿಯ ಪರವಾಗಿದ್ದಾರೆ. ನಮ್ಮ ಸರ್ಕಾರದ ಮೂಲ ಮಂತ್ರವೇ ಅಭಿವೃದ್ಧಿಯಾಗಿದೆ. ಮತದಾರರು ಪ್ರಬುದ್ಧರಾಗಿದ್ದಾರೆ. ಅಭಿವೃದ್ಧಿಯ ಪರವಾಗಿರುವ ನಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ. ತಮ್ಮ ಜೊತೆ ಕೆಲಸ ಮಾಡಿದ ವಿಜಯೇಂದ್ರ ಅವರಿಗೂ ಧನ್ಯವಾದ ಎಂದರು. ಕರ್ನಾಟಕ ಮಾತ್ರವಲ್ಲದೇ ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಕೂಡ ಬಿಜೆಪಿ ಮತ್ತು ಮಿತ್ರಪಕ್ಷಗಳ ಪರ ವ್ಯಕ್ತವಾಗಿದೆ. ಈ ಫಲಿತಾಂವು ಮೋದಿ ಅವರ ಜನಪ್ರಿಯತೆ ಹಾಗೂ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.