ಬೆಂಗಳೂರು : ಉಪ ಮುಖ್ಯಮಂತ್ರಿ ಆದರೂ ಝೀರೋ ಟ್ರಾಫಿಕ್ ಬಳಸದೇ ಸರಳತೆ ಮೆರೆದಿರುವ ಡಿಸಿಎಂ ಗೋವಿಂದ ಕಾರಜೋಳ ಇದೀಗ ದೂರದ ಪ್ರಯಾಣಕ್ಕೆ ಕಾರಿನ ಬದಲು ಬಸ್ಸಿನಲ್ಲಿ ಪ್ರಯಾಣಿಸುವ ಚಿಂತನೆ ನಡೆಸಿದ್ದಾರೆ.
ಕಳೆದ ರಾತ್ರಿ ಬಾಗಲಕೋಟೆಯ ಇಳಕಲ್‌ನಲ್ಲಿದ್ದ ಡಿಸಿಎಂ ಗೋವಿಂದ ಕಾರಜೋಳ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುವ ಬದಲು ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದರು. ವಾಯವ್ಯ ಸಾರಿಗೆಯ ಹವಾನಿಯಂತ್ರಿತ ಸ್ಲೀಪರ್ ಬಸ್ಸಿನಲ್ಲಿ ಬೆಂಗಳೂರಿಗೆ ಆಗಮಿಸಿದರು.
ಕಾರು ಬಿಟ್ಟು ಸಾರ್ವಜನಿಕ ಸಾರಿಗೆ ಬಳಸುವ ಮೂಲಕ ಜನಪ್ರತಿನಿಧಿಗಳೂ ಸಹ ಸಮೂಹ ಸಾರಿಗೆ ಬಳಸಿ ಎನ್ನುವ ಸಂದೇಶವನ್ನು ಡಿಸಿಎಂ ಗೋವಿಂದ ಕಾರಜೋಳ ಸಾರಿದ್ದಾರೆ. ಇನ್ನು ಮುಂದೆ ದೂರದ ಪ್ರಯಾಣಕ್ಕೆ ಅನಗತ್ಯವಾಗಿ ಕಾರನ್ನು ಬಳಸದೇ ಸಾಧ್ಯವಾದಷ್ಟು ಬಸ್ಸು, ರೈಲಿನ ಮೂಲಕ ಪ್ರಯಾಣ ಬೆಳೆಸಲು ಡಿಸಿಎಂ ನಿರ್ಧರಿಸಿದ್ದಾರೆ.