ಬೆಂಗಳೂರು : ಪ್ರಸ್ತುತ ಸನ್ನಿವೇಶದಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾಗುತ್ತಿವೆ. ಅದಕ್ಕೆ ಅನುಗುಣವಾಗಿ ಸೈಬರ್ ಸುರಕ್ಷತೆ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಸೈಬರ್ ಸುರಕ್ಷತಾ ಕಾರ್ಯನೀತಿ ರೂಪಿಸಲು ಸರ್ಕಾರ ಚಾಲನೆ ನೀಡಿದೆ ಎಂದು ಡಿಸಿಎಂ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಬರ್ ಸುರಕ್ಷತಾ ಲಾಂಛನಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಸಾರ್ವಜನಿಕ ಸೇವೆಯನ್ನು ಜನರಿಗೆ ತಲುಪಿಸುವುದಕ್ಕಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಆಧಾರಿತ ತಂತ್ರೋಪಾಯಗಳ ಅಳವಡಿಕೆ ದಿನಗಳೆದಂತೆ ಹೆಚ್ಚಾಗುತ್ತಿದೆ. ಇದರೊಂದಿಗೆ ಸೈಬರ್ ಅಪಾಯಗಳು ಕೂಡ ಗಣನೀಯವಾಗಿ ಅಧಿಕವಾಗುವ ಅಪಾಯವಿದೆ. ಹೀಗಾಗಿ, ನಾಗರಿಕರು, ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತಾ ಕಾರ್ಯನೀತಿ ರೂಪಿಸಲಾಗುವುದು ಎಂದರು.
ಅಮೆರಿಕದ ಎಫ್ಬಿಐ ವರದಿ ಪ್ರಕಾರ, ಕೊರೊನಾ ಪಿಡುಗಿನ ನಂತರದ ಅವಧಿಯಲ್ಲಿ ಸೈಬರ್ ದುಷ್ಕೃತ್ಯಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯಲ್ಲಿ ಶೇ.400ರಷ್ಟು ಹೆಚ್ಚಳವಾಗಿದೆ. ಈ ತನಿಖಾ ಸಂಸ್ಥೆಗೆ ಪ್ರತಿ ದಿನ 4,000 ದೂರು ಬರುತ್ತಿವೆ. ದುಷ್ಕರ್ಮಿಗಳು ಫಿಷಿಂಗ್, ರಾನ್ಸಮ್ ವೇರ್ ಮತ್ತು ಮಾಲ್ವೇರ್ ದಾಳಿಗಳ ಮೂಲಕ ಸುಲಿಗೆ ಮಾಡುತ್ತಿದ್ದಾರೆ. ಸೈಬರ್ ಕ್ರಿಮಿನಲ್ಗಳು ಕೊರೊನಾ ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ಸಾವಿರಾರು ವಂಚಕ ಪೋರ್ಟಲ್ಗಳನ್ನು ಆರಂಭಿಸಿದ್ದಾರೆ ಎಂದು ಅಶ್ವತ್ಥ್ ನಾರಾಯಣ ವಿವರಿಸಿದರು.
ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡವು (CERT-In) ಸಲಹಾ ಸೂಚಿ ಪ್ರಕಟಿಸಿ, ಕೊರೊನಾ ಸೋಂಕಿನ ನೆಪದಲ್ಲಿ ಹೇಗೆ ಸೈಬರ್ ದಾಳಿಗಳನ್ನು ಎಸಗಲಾಗುತ್ತಿದೆ ಎಂಬುದರ ಕುರಿತು ವಿವರಿಸಿದೆ. ಬಹುತೇಕ ಸೈಬರ್ ದಾಳಿಗಳನ್ನು ಫಿಷಿಂಗ್, ಇ-ಮೇಲ್ಗಳು, ಅಂತರ್ಜಾಲ ತಾಣಗಳಲ್ಲಿ ದಾರಿ ತಪ್ಪಿಸುವ ಜಾಹೀರಾತುಗಳು ಹಾಗೂ ಮೂರನೇ ಪಕ್ಷದಾರರ ಆ್ಯಪ್ ಹಾಗೂ ಪ್ರೋಗ್ರಾಮ್ಗಳ ಮೂಲಕ ಎಸಗಲಾಗುತ್ತಿದೆ. ಅದೇ ರೀತಿ ಕಂಪ್ಯೂಟರ್ಗಳು, ರೌಟರ್ಗಳು, ಸುರಕ್ಷತೆಯಿಲ್ಲದ ಹೋಂ ನೆಟ್ವರ್ಕ್ಗಳ ಮೇಲೂ ಸೈಬರ್ ದಾಳಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿವರಿಸಿದರು.
ಭಾರತದ ಸಿಲಿಕಾನ್ ಕಣಿವೆ ಎಂದೇ ಹೆಸರಾಗಿರುವ ಬೆಂಗಳೂರು ಸಹಜವಾಗಿಯೇ ಸೈಬರ್ ಕ್ರಿಮಿನಲ್ಗಳ ಟಾರ್ಗೆಟ್ ಆಗಿದೆ. ಆದ್ದರಿಂದ ಸರ್ಕಾರ ಹಾಗೂ ಸಂಸ್ಥೆಗಳಿಗೆ ಸೈಬರ್ ಜಾಗೃತಿ ಮೂಡಿಸಿಕೊಳ್ಳುವುದು ಪ್ರಮುಖವಾಗಿ ಪರಿಣಮಿಸಿದೆ. ಯಾವುದೇ ಸಂಸ್ಥೆಯಲ್ಲಿ ಸೈಬರ್ ಅರಿವು ಇರುವ ಉದ್ಯೋಗಿಗಳೇ ಸೈಬರ್ ಅಪಾಯದ ವಿರುದ್ಧ ಅತ್ಯುತ್ತಮ ರಕ್ಷಕರಾಗಿರುತ್ತಾರೆ.
ಇದನ್ನು ಗಮನದಲ್ಲಿರಿಸಿಕೊಂಡು ಜಾಗತಿಕವಾಗಿ ಅಕ್ಟೋಬರ್ ತಿಂಗಳನ್ನು ಸೈಬರ್ ಸುರಕ್ಷತಾ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಅದಕ್ಕನುಗುಣವಾಗಿ ಕರ್ನಾಟಕದಲ್ಲಿಯೂ ಈ ಬಾರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇವಿ ರಮಣ ರೆಡ್ಡಿ, ಸಿಐಡಿ- ಸೈಬರ್ ಅಪರಾಧ ಇಲಾಖೆಯ ಹೆಚ್ಚುವರಿ ಡಿಜಿಪಿ ಉಮೇಶ್ ಕುಮಾರ್, ಕರ್ನಾಟಕ ಮಾಹಿತಿ ತಂತ್ರಜ್ಞಾನ ದೂರದರ್ಶಿತ್ವ ತಂಡದ ಅಧ್ಯಕ್ಷ ಕ್ರಿಸ್ ಗೋಪಾಲ ಕೃಷ್ಣನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.