ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಹಿಂದೆ ಬಿದ್ದಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಕಳೆದ ವರ್ಷ ರಾಜ್ಯದಲ್ಲಿ 12,041 ಪ್ರಕರಣಗಳು ದಾಖಲಾಗಿವೆ ಆದರೆ ಪೊಲೀಸರು ಪತ್ತೆ ಹಚ್ಚಿದ್ದು ಕೇವಲ 193 ಕೇಸ್ಗಳನ್ನು ಮಾತ್ರ ಎಂಬ ಮಾಹಿತಿ ಹೊರಬಿದ್ದಿದೆ. ಬೆಂಗಳೂರು, ಜಿಲ್ಲೆಗಳ ಕಮಿಷನರೇಟ್ ವ್ಯಾಪ್ತಿ ಸೇರಿ ಒಟ್ಟು 35 ವಿಭಾಗಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ.
ಕುತೂಹಲಕಾರಿ ವಿಷಯವೆಂದರೆ 27 ವಿಭಾಗಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ ಒಂದು ಪ್ರಕರಣವನ್ನೂ ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಕುರಿತಂತೆ ಅಂತರ್ಜಾಲ, ಜಾಲತಾಣ ಕಂಪೆನಿಗಳ ಅಸಹಕಾರ, ದೀರ್ಘಾವಧಿ ಪತ್ರ ವ್ಯವಹಾರ ಒಂದೆಡೆಯಾದರೆ ಪೊಲೀಸರ ತನಿಖೆಯಲ್ಲಿ ಅವೈಜ್ಞಾನಿಕತೆ, ಸೈಬರ್ ಕ್ರೈಂ ಕುರಿತಂತೆ ಪೊಲೀಸ್ ಸಿಬ್ಬಂದಿಗೆ ಜ್ಞಾನ, ಕೌಶಲ ಹಾಗೂ ತರಬೇತಿ ಕೊರತೆಯಿಂದ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.
ಕಳೆದ ವರ್ಷ ರಾಜಧಾನಿಯಲ್ಲಿ 10,555 ಪ್ರಕರಣಗಳು ದಾಖಲಾಗಿದ್ದರೂ ರಾಜ್ಯ ಸರ್ಕಾರ ಸೈಬರ್ ಕ್ರೈಂ ತಡೆಯಲು ಗಂಭೀರ ಚಿಂತನೆ ನಡೆಸದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂಟರ್ ನೆಟ್ ಬಳಕೆ, ಸಾಮಾಜಿಕ ಜಾಲತಾಣಗಳ ಬಳಕೆ, ಈ-ಮೇಲ್, ಇ-ವ್ಯಾಲೆಟ್ ಬಳಕೆದಾರರ ಸಂಖ್ಯೆ ದಿನೇ ದಿನೆ ಅಧಿಕವಾಗುತಿದ್ದು, ಎಚ್ಚರಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ . ರಾಜ್ಯ ಅಪರಾಧ ದಾಖಲಾತಿ ಘಟಕ (ಎಸ್ ಸಿಆರ್ ಬಿ) ಮಾಹಿತಿ ಪ್ರಕಾರ ದಾಖಲಾಗುವ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಶೇ. 0.6ರಷ್ಟು ಮಾತ್ರ ಪೊಲೀಸರು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆಯಂತೆ .
ಸೈಬರ್ ಕ್ರೈಂ ಪತ್ತೆಯಾಗದಿರಲು ಕಾರಣಗಳೇನು?
ಸಾಮಾಜಿಕ ಜಾಲತಾಣ ಕಂಪೆನಿಗಳ ಅಸಹಕಾರ.
ದೇಶದಲ್ಲಿ ಬ್ರೌಸರ್ ಕಂಪೆನಿಗಳ ಪ್ರಾದೇಶಿಕ ವಿಭಾಗಗಳು ಇಲ್ಲದಿರುವುದು.
ವಿದೇಶದಲ್ಲಿ ತನಿಖಾ ಮಾಹಿತಿ ಪಡೆದುಕೊಳ್ಳಲು ಕಾನೂನಿನ ತೊಡಕು.
ಸೈಬರ್ ಕ್ರೈಂ ಕುರಿತಂತೆ ಸಾಮಾನ್ಯ ಜನರಲ್ಲಿ ಅರಿವಿಲ್ಲದಿರುವುದು.
ಸೈಬರ್ ಕ್ರೈಂ ತಜ್ಞರು ಹೇಳೋದೇನು ?
ಕೇಂದ್ರ ಹಾಗೂ ರಾಜ್ಯದಲ್ಲಿ ಸೈಬರ್ ಕ್ರೈಂ ತಡೆಯಲು ಪ್ರತ್ಯೇಕವಾಗಿ ಸೈಬರ್ ಕ್ರೈಂ ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಬಹುದು. ಸೈಬರ್ ಕ್ರೈಂ ಕುರಿತಂತೆ ಪೊಲೀಸರಿಗೆ ಸೂಕ್ತ ತರಬೇತಿ ಹಾಗೂ ತಾಂತ್ರಿಕ ಕೌಶಲ ಇಲ್ಲದಿರುವುದು ಬಲುದೊಡ್ಡ ಮೈನಸ್ ಪಾಯಿಂಟ್ ಆಗಿದೆ. ಪ್ರಕರಣಗಳ ತನಿಖೆ ತ್ವರಿತವಾಗಿ ಬೇಧಿಸಲು ಖಾಸಗಿ ಸೈಬರ್ ವಿಧಿ ವಿಜ್ಞಾನ ಪ್ರಯೋಗಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ವಿದೇಶಗಳಲ್ಲಿ ಸೈಬರ್ ಬಗ್ಗೆ ಇರುವ ಕಠಿಣ ಕಾನೂನು ದೇಶ ಹಾಗೂ ರಾಜ್ಯದಲ್ಲಿ ಜಾರಿಗೆ ತರಬೇಕು ಹಾಗೂ ಪ್ರಮುಖವಾಗಿ ಸೈಬರ್ ಸ್ಯೆಕೂರಿಟಿಗಾಗಿ ಸರ್ಕಾರ ಪ್ರತ್ಯೇಕ ಸಮಿತಿ ರಚಿಸಬೇಕು.
ಸೈಬರ್ ಕ್ರೈಂ ಬಗ್ಗೆ ಸಾಮಾನ್ಯ ಜನರಲ್ಲಿ ಸೂಕ್ತ ತಿಳಿವಳಿಕೆ ಇಲ್ಲದ ಕಾರಣ ನಗರ ಪ್ರದೇಶಗಳಲ್ಲಿ ಆನ್ಲೈನ್ ವಂಚನೆ ಪ್ರಕರಗಳು ಹೆಚ್ಚಾಗುತ್ತಿವೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಸೈಬರ್ ಕ್ರೈಂ ತಜ್ಞೆ ಶುಭಮಂಗಳ ಮಾಹಿತಿ ನೀಡಿದ್ದಾರೆ.