ಬೆಂಗಳೂರು : ಕೆಲಸಕ್ಕೆ ತೆರಳಿದ ವೇಳೆ ಮನೆಯಲ್ಲಿ ಒಂಟಿಯಾಗಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ ನಗರದ 1ನೇ ಹೆಚ್ಚುವರಿ ತ್ವರಿತಗತಿ ವಿಶೇಷ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್. ರೂಪಾ, ಬೆಂಗಳೂರು ನಗರದ ನಿವಾಸಿ ಪ್ರಬೀರ್ ಅದಕ್ ಅಲಿಯಾಸ್ ಗಣೇಶ್ ಅದಕ್ (42) ಅಪರಾಧಿಯೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತ ಬಾಲಕಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಸಂತ್ರಸ್ತೆಯ ಬಾಲಕಿಯ ಪೋಷಕರು ಅಪರಾಧಿ ಪ್ರಬೀರ್ ಅದಕ್‌ನನ್ನು ಕಾರ್ಪೆಂಟಿಂಗ್ ಕೆಲಸಕ್ಕಾಗಿ 2017ರ ಆಗಸ್ಟ್ 17ರಂದು ಮನೆಗೆ ಕರೆದುಕೊಂಡು ಹೋಗಿದ್ದರು. ಅಂದು ಸಂಜೆ 5 ಗಂಟೆಗೆಯವರೆಗೆ ಕೆಲಸ ಮಾಡಿದ್ದ ಪ್ರಬೀರ್ ಅದಕ್ನಲ್ಲಿ ನಂತರ ರೂಮಿನಲ್ಲಿ ಪೆನ್ ಸ್ಟ್ಯಾಂಡ್ ಅಳವಡಿಸಬೇಕು ಎಂದು ತಿಳಿಸಿದಾಗ, ಸಂತ್ರಸ್ತೆಯನ್ನು ಸಹಾಯಕ್ಕೆ ಕರೆದಿದ್ದ. ಗೋಡೆ ಮೇಲೆ ಮಾರ್ಕ್ ಮಾಡಿಕೊಳ್ಳುವುದಕ್ಕಾಗಿ ಪೆನ್ ಸ್ಟ್ಯಾಂಡ್‌ನ್ನು ಹಿಡಿದುಕೊಳ್ಳುವಂತೆ ಅಪರಾಧಿ ಸಂತ್ರಸ್ತೆಗೆ ತಿಳಿಸಿದ್ದ.
ಬಾಲಕಿಯು ಪೆನ್ ಸ್ಟ್ಯಾಂಡ್ ಅನ್ನು ಗೋಡೆಗೆ ಒರೆಗಿಸಿ ಹಿಡಿದುಕೊಂಡಿದ್ದಾಗ ಆರೋಪಿಯು ಹಿಂದಿನಿಂದ ಆಕೆಯನ್ನು ಅಪ್ಪಿಕೊಂಡು ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಘಟನೆ ಕುರಿತು ಸಂತ್ರಸ್ತೆಯ ತಾಯಿ ಬೆಳ್ಳಂದೂರು ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಪ್ರಬೀರ್‌ನನ್ನು ಬಂಧಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸಾಕ್ಷಿದಾರರ ಸಾಕ್ಷ್ಯ ಪರಿಗಣಿಸಿದ ವಿಶೇಷ ನ್ಯಾಯಾಲಯ, ಪ್ರಬೀರ್ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ ಎಂದು ತಿಳಿಸಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿ ಪೊಲೀಸರ ಪರ ಸರ್ಕಾರಿ ಅಭಿಯೋಜಕಿ ಪಿ.ಕೃಷ್ಣವೇಣಿ ಅವರು ಪ್ರಬಲ ವಾದ ಮಂಡಿಸಿದ್ದರು.
ಇದನ್ನೂ ಓದಿ : ಮಾಡಾಳ್ ವಿರುಪಾಕ್ಷಪ್ಪ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಲು ಲೋಕಾಯಕ್ತ ಚಿಂತನೆ