ದೇವನಹಳ್ಳಿ: ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಸೋಂಕು ಅನೇಕರನ್ನು ಬಲಿಪಡೆಯುತ್ತಿದೆ. ಹೀಗಾಗಿ ವಿಧಿ ವಿಧಾನದ ಮೂಲಕ ಶವಸಂಸ್ಕಾರ ನೆರವೇರಿಸಲು ಆಯಾ ಭಾಗದಲ್ಲೇ ಸರ್ಕಾರಿ ಜಮೀನುಗಳಲ್ಲಿ ತಾತ್ಕಾಲಿಕ ಚಿತಾಗಾರ ನಿರ್ಮಿಸಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಕೋರಮಂಗಲ ಕೆರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಚಿತಾಗಾರದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಮೆರಿಕ ಮೂಲದ ಕಂಪನಿಯಿಂದ 160 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳು ಬರಲಿದ್ದು, ಇವುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ಗಳಿಗೆ ಕಳಿಸಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲೂಕಿನ ಕೋವಿಡ್ ಕೇರ್ ಸೆಂಟರ್‌ಗಳಿಗೆ ತಲಾ 40 ಆಕ್ಸಿಜನ್ ಕಾನ್ಸೆನ್ಟ್ರೇಟರ್ (oxygen concentrators) ಮತ್ತು ಔಷಧೀಯ ಕಿಟ್ ಗಳನ್ನು ಸಂಬಂಧಪಟ್ಟ ಜಿಲ್ಲೆಯ ಶಾಸಕರುಗಳ ಉಪಸ್ಥಿತಿಯಲ್ಲಿ ಆಯಾ ತಾಲೂಕು ವೈದ್ಯಾಧಿಕಾರಿಗಳಿಗೆ ವಿತರಣೆ ಮಾಡುವುದಾಗಿ ತಿಳಿಸಿದರು.
ಬೆಂಗಳೂರಿನ ತಾವರೆಕೆರೆ ಹಾಗೂ ಗಿಡ್ಡೇನಹಳ್ಳಿಯಲ್ಲಿ ಈಗಾಗಲೇ ಚಿತಾಗಾರ ಆರಂಭವಾಗಿದೆ. ಅದೇ ಮಾದರಿಯಲ್ಲಿ ದೇವನಹಳ್ಳಿ ತಾಲೂಕಿನಲ್ಲಿ ಚಿತಾಗಾರ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಉಳಿದ ಮೂರು ತಾಲೂಕಿಗಳಲ್ಲಿ ಚಿತಾಗಾರ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ ಅವರು, ಇದೊಂದು ಭಾವನಾತ್ಮಕ ಪ್ರಕ್ರಿಯೆ ಆಗಿರುವುದರಿಂದ ಶವಸಂಸ್ಕಾರಕ್ಕೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಬಾರದು. ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೃತಪಟ್ಟವರ ಶವ ಸಂಸ್ಕಾರ ಮಾಡಲು ಕುಟುಂಬಸ್ಥರು ಪರದಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರು ನಗರದ ಸುತ್ತಮುತ್ತ ತಾತ್ಕಾಲಿಕ ಚಿತಾಗಾರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಕೋವಿಡ್ ಕಾರಣದಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ ಕರೆತರುವ ಆ್ಯಂಬುಲೆನ್ಸ್ಗಳಲ್ಲಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವುದರಿಂದ ಇನ್ನು ಮುಂದೆ ಇಂಥ ಶವಸಂಸ್ಕಾರಕ್ಕೆ ಉಚಿತ ಆ್ಯಂಬುಲೆನ್ಸ್ ಸೇವೆಗೆ ಆದೇಶ ಮಾಡಲಾಗಿದೆ ಎಂದು ತಿಳಿಸಿದರು. ಕೋವಿಡ್ ವಿಚಾರದಲ್ಲಿ ಯಾರೇ ಆಗಲಿ ಅಕ್ರಮ ಎಸಗಿದರೆ, ಸೋಂಕಿತರು ಹಾಗೂ ಸಂಬಂಧಿಕರ ಜೊತೆ ಅನುಚಿತವಾಗಿ ವರ್ತಿಸಿದರೆ, ನೋಟೀಸ್ ಸಹಾ ನೀಡದೇ, ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ರಾಜ್ಯದಲ್ಲಿಂದು ನಡೆದ ನಾನಾ ಕಸರತ್ತುಗಳು ಇಲ್ಲಿವೆ ನೋಡಿ..