ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದಾರೆ. ಆತ್ಮಸಾಕ್ಷಿಯ ಮತವನ್ನು ಜಾತ್ಯತೀತತೆಗೆ ಬದ್ಧವಾಗಿರುವ ನಮ್ಮ ಪಕ್ಷದ ಮನ್ಸೂರ್ ಅಲಿ ಖಾನ್ ಅವರಿಗೆ ಚಲಾಯಿಸಬೇಕೆಂದು ಕೋರಿದ್ದಾರೆ.
ಎರಡು ಪುಟಗಳ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ, ದೇಶ ಅತ್ಯಂತ ಆತಂಕಕಾರಿ ಹಾದಿಯಲ್ಲಿ ಸಾಗುತ್ತಿರುವುದು ನಮ್ಮೆಲ್ಲರ ಅರಿವಿನಲ್ಲಿದೆ. ಸಾಮಾಜಿಕ ನ್ಯಾಯ, ಸಮಾನತೆ, ಭಾತೃತ್ವ, ಜಾತ್ಯತೀತತೆ ಮೊದಲಾದ ಸಂವಿಧಾನದ ಆಶಯಗಳ ಮೇಲೆ ಪ್ರಭುತ್ವವೇ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳು ಸೇರಿದಂತೆ ಎಲ್ಲ ಬದಲಾವಣೆಗಳಿಗೂ ರಾಜಕೀಯ ಬದಲಾವಣೆಯೇ ಚಾಲನಾ ಶಕ್ತಿ ಎನ್ನುವುದು ನಾವು ಇತಿಹಾಸದಿಂದ ಕಲಿತ ಪಾಠವಾಗಿದೆ ಎಂದು ಹೇಳಿದ್ದಾರೆ.
ಕಲಿತ ಪಾಠವನ್ನು ಪ್ರಯೋಗಿಸುವ ಅವಕಾಶ ಎದುರಾದಾಗ ಮುಕ್ತ ಮನಸ್ಸಿನಿಂದ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯ ಕರ್ತವ್ಯವಾಗಿದೆ. ಇಂತಹದ್ದೊಂದು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶವನ್ನು ಇದೇ ಜೂನ್ 10ರಂದು ರಾಜ್ಯದಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ನಮಗೆ ನೀಡಿದೆ. ಕಾಂಗ್ರೆಸ್ ಕೋಮುವಾದದ ಜೊತೆ ಎಂದೂ ರಾಜಿಯಾಗದೆ ಜಾತ್ಯತೀತತೆ ಪರವಾಗಿ ಗಟ್ಟಿಯಾಗಿ ನಿಂತಿರುವ ಪಕ್ಷ. ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಪ್ರಸಂಗ ಎದುರಾದಾಗ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಲೆಕ್ಕಿಸದೆ ಜಾತ್ಯತೀತತೆ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದಿದ್ದಾರೆ.
ಹೆಚ್ಡಿಡಿ-ಹೆಚ್ಡಿಕೆಗೆ ಬೆಂಬಲಿಸಿದ್ದೆವು: ಜಾತ್ಯತೀತ ಜನತಾದಳದ ಹಿರಿಯ ನಾಯಕ ಹೆಚ್.ಡಿ. ದೇವೇಗೌಡರಿಗೆ ಪ್ರಧಾನಿಯಾಗುವ ಅವಕಾಶ ಎದುರಾದಾಗ ಕಾಂಗ್ರೆಸ್ ಪಕ್ಷ ಮುಕ್ತ ಹೃದಯದಿಂದ ಬೆಂಬಲಿಸಿತ್ತು. ಎರಡು ವರ್ಷಗಳ ಹಿಂದೆ ದೇವೇಗೌಡರು ರಾಜ್ಯಸಭಾ ಚುನಾವಣೆಯನ್ನು ಎದುರಿಸಿದಾಗ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಗೌಡರನ್ನು ಬೆಂಬಲಿಸಿ ಗೆಲ್ಲಿಸಿತ್ತು. ನಾಲ್ಕು ವರ್ಷಗಳ ಹಿಂದೆ ಕೇವಲ 37 ಶಾಸಕರನ್ನು ಹೊಂದಿದ್ದ ಜಾತ್ಯತೀತ ಜನತಾದಳಕ್ಕೆ ನಮ್ಮ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿತ್ತು. ಇದು ನಮ್ಮ ಸೈದ್ಧಾಂತಿಕ ಬದ್ಧತೆ ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಈ ಬಾರಿ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇದೇ ಸೈದ್ಧಾಂತಿಕ ಬದ್ಧತೆಯಿಂದ ಜಾತ್ಯತೀತ ಜನತಾದಳ ನಮ್ಮ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬಹುದು ಎಂಬ ನಿರೀಕ್ಷೆಯಿಂದ ನಮ್ಮ ಯುವನಾಯಕ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿ ಘೋಷಣೆ ಮಾಡಿದ ಮರುದಿನ ತಮ್ಮಲ್ಲಿ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸುವಷ್ಟು ಮತಗಳು ಲಭ್ಯವಿಲ್ಲದೆ ಇದ್ದರೂ ಜೆಡಿಎಸ್ ಹಠಾತ್ತನೆ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದು ನಮಗೆ ಆಘಾತವುಂಟುಮಾಡಿದೆ ಎಂದು ತಮ್ಮ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ಗೆ ಮತ ಹಾಕುವಂತೆ ನನಗೆ ಕರೆ ಬಂದಿಲ್ಲ: ಶಾಸಕ ಎಸ್. ಆರ್ ಶ್ರೀನಿವಾಸ್
ಈ ಚುನಾವಣೆ ಬಹುಮುಖ್ಯವಾಗಿ ಜಾತ್ಯತೀತತೆ ಮತ್ತು ಕೋಮುವಾದ ಎಂಬ ಎರಡು ಸಿದ್ಧಾಂತಗಳ ನಡುವಿನ ಸಮರವೂ ಆಗಿದೆ ಎನ್ನುವುದನ್ನು ನೀವು ಬಲ್ಲಿರಿ. ರಾಷ್ಟ್ರಕವಿ ಕುವೆಂಪು ಅವರು ಹೆಮ್ಮೆಯಿಂದ ಹೇಳಿಕೊಂಡ ಸರ್ವಜನಾಂಗದ ಶಾಂತಿಯ ತೋಟವನ್ನು ಬಿಜೆಪಿ, ಧಾರ್ಮಿಕ ದ್ವೇಷಾಸೂಯೆಗಳಿಂದ ಹಾಳುಗೆಡಹುತ್ತಿರುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು, ನಾಡಪ್ರಭು ಕೆಂಪೇಗೌಡ, ಕುವೆಂಪು ಸೇರಿದಂತೆ ನಾವು ಗೌರವಿಸುವ ಮಹಾಪುರುಷರಿಗೆ ಮಾಡಿರುವ ಅವಮಾನ ಇದಕ್ಕೆ ಇತ್ತೀಚಿನ ಜ್ವಲಂತ ಉದಾಹರಣೆ ಎಂದೂ ಹೇಳಿದ್ದಾರೆ.
ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ: ಕನ್ನಡಿಗರೆಲ್ಲರ ಆತ್ಮಸ್ವರೂಪಿಯಾದ ಕುವೆಂಪು ವಿರಚಿತ ನಾಡಗೀತೆಯನ್ನೇ ತಿರುಚಿದ ಕಿಡಿಗೇಡಿಯಿಂದಲೇ ಈ ಎಲ್ಲ ದುಷ್ಕತ್ಯಗಳನ್ನು ಮಾಡಿಸುವ ಧಾರ್ಷ್ಟ್ಯವನ್ನು ಬಿಜೆಪಿ ತೋರಿದೆ. ರಾಜ್ಯಸಭಾ ಚುನಾವಣೆಯ ಮೂಲಕ ಒದಗಿ ಬಂದ ಅವಕಾಶವನ್ನು ಬಳಸಿಕೊಂಡು ಕೋಮುವಾದಿ ಮತ್ತು ಜಾತಿವಾದಿ ಬಿಜೆಪಿಗೆ ತಕ್ಕ ಉತ್ತರ ನೀಡಬೇಕೆಂದು ಜಾತ್ಯತೀತತೆ, ಸೌಹಾರ್ದತೆ ಮತ್ತು ಸಹಬಾಳ್ವೆಯ ಮೇಲೆ ನಂಬಿಕೆ ಇಟ್ಟಿರುವ ನಾಡಬಾಂಧವರೆಲ್ಲರ ಮನದಾಳದ ಹಾರೈಕೆಯಾಗಿದೆ ಎಂದಿದ್ದಾರೆ.
ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆಯಾಗಿ ರಾಜ್ಯಸಭಾ ಚುನಾವಣೆ ನಮ್ಮ ಮುಂದಿದೆ. ಸೈದ್ಧಾಂತಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಕಡೆ ಇದ್ದರೆ, ಕೋಮುವಾದವನ್ನೇ ಉಸಿರಾಡುವ ಬಿಜೆಪಿ ಇನ್ನೊಂದು ಕಡೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಎರಡನೇ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿ ಖಾನ್ ಅವರ ಸೋಲು-ಗೆಲುವನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲ, ಜಾತ್ಯತೀತತೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಸೈದ್ಧಾಂತಿ ಬದ್ಧತೆಯಿಂದ ಜಾತ್ಯತೀತ ಜನತಾದಳ ಬೆಂಬಲಿಸಿದರೆ ಈ ಯುವನಾಯಕನ ಆಯ್ಕೆ ನಿರಾತಂಕವಾಗಿ ನಡೆದುಹೋಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಊಹಾಪೋಹಗಳಿಗೆ ಕಿವಿ ಕೊಡಬೇಡಿ, ಜೆಡಿಎಸ್ ಅಭ್ಯರ್ಥಿಗೆ ನನ್ನ ಮತ: ಶಾಸಕ ಜಿ ಟಿ ದೇವೇಗೌಡ
ಮನ್ಸೂರು ಅಲಿ ಖಾನ್ ಗೆಲುವು ಯಾವುದೇ ಒಂದು ಪಕ್ಷದ ಗೆಲುವಾಗದೆ ಜಾತ್ಯತೀತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಪಕ್ಷಗಳೆರಡರ ಸೈದ್ಧಾಂತಿಕ ಗೆಲುವಾಗುತ್ತದೆ. ಪ್ರಜಾಪ್ರತಿನಿಧಿಗಳಾದ ನಾವೆಲ್ಲರೂ ನಮ್ಮ ಪ್ರಭುಗಳಾದ ಪ್ರಜೆಗಳ ಆತ್ಮಸಾಕ್ಷಿಗೆ ದನಿಯಾಗಬೇಕಾಗಿರುವುದು ಕರ್ತವ್ಯವಾಗಿದೆ. ಈ ಆತ್ಮಸಾಕ್ಷಿಯ ಮತವನ್ನು ಜಾತ್ಯತೀತತೆಗೆ ಬದ್ಧವಾಗಿರುವ ನಮ್ಮ ಪಕ್ಷದ ಮನ್ಸೂರ್ ಅಲಿ ಖಾನ್ ಅವರಿಗೆ ಚಲಾಯಿಸಬೇಕೆಂದು ನನ್ನ ಸವಿನಯ ವಿನಂತಿ ಎಂದು ಸಿದ್ದರಾಮಯ್ಯ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗೆ ವಿಧಾನಸೌಧದ ಮತಕೇಂದ್ರದಲ್ಲಿ ಸಕಲ ಸಿದ್ಧತೆ