ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯಲ್ಲಿ ಕೆಲ ಕಾಲ ಅರ್ಜಿದಾರ ವಕೀಲರ ವಾದ ಆಲಿಸಿದ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ಈ ಸಂಬಂಧ ವಕೀಲ ಎನ್.ಪಿ ಅಮೃತೇಶ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ ವಕೀಲ ಎನ್.ಪಿ ಅಮೃತೇಶ್, ಇದೊಂದು ಪೂರ್ವನಿಯೋಜಿತ ಪ್ರಕರಣ, ಹೀಗಾಗಿಯೇ ಏಕಾಏಕಿ 2ರಿಂದ 3 ಸಾವಿರ ಜನ ಸೇರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಆದ್ದರಿಂದ, ಗಲಭೆಕೋರರ ವಿರುದ್ಧ ಕೋಕಾ ಕಾಯ್ದೆ ಹಾಗೂ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯ ಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ವಿಚಾರಣಾ ಸಮಿತಿ ರಚನೆ ಮಾಡಬೇಕು ಎಂದು ಕೋರಿದರು.
ಕ್ಲೇಮ್ ಕಮಿಷನರ್ ನೇಮಕಕ್ಕೆ ಒಪ್ಪಿಗೆ ಪಡೆಯಲು ಸೂಚನೆ: ಗಲಭೆಯಲ್ಲಿ ಉಂಟಾದ ಸಾರ್ವಜನಿಕ ಆಸ್ತಿ ನಷ್ಟವನ್ನು ಅಂದಾಜು ಮಾಡಿ, ಹೊಣೆಗಾರಿಕೆ ನಿಗದಿಪಡಿಸಲು ಹಾಗೂ ನಷ್ಟ ಅನುಭವಿಸಿದವರಿಗೆ ಪರಿಹಾರ ದೊರಕಿಸಲು ಕ್ಲೇಮ್ ಕಮಿಷನರ್ ನೇಮಕ ಮಾಡಲು ಕೋರಿರುವ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟ್, ಇದೇ ವೇಳೆ ವಿಚಾರಣೆ ನಡೆಸಿತು.
ಈ ವೇಳೆ ರಿಜಿಸ್ಟ್ರಾರ್ ಜನರಲ್ಗೆ ಸೂಚನೆ ನೀಡಿದ ವಿಭಾಗೀಯ ಪೀಠ, ಈಚೆಗೆ ನಿವೃತ್ತರಾಗಿರುವ ಹೈಕೋರ್ಟ್ ನ್ಯಾಯಮೂರ್ತಿಗಳು ಅಥವಾ ಜಿಲ್ಲಾ ನ್ಯಾಯಾಧೀಶರ ಬಳಿ ಕ್ಲೇಮ್ ಕಮಿಷನರ್ ಜವಾಬ್ದಾರಿ ನಿಭಾಯಿಸುವ ಬಗ್ಗೆ ಚರ್ಚೆ ನಡೆಸಿ, ಒಪ್ಪಿಗೆ ಪಡೆಯುವಂತೆ ನಿರ್ದೇಶಿಸಿತು.