ಬೆಂಗಳೂರು: ಕೃಷಿ ಸಚಿವರಾಗಿ ಬಿ.ಸಿ. ಪಾಟೀಲ್ ನೂರು ದಿನ ಪೂರೈಸಿರುವ ಹಿನ್ನೆಲೆಯಲ್ಲಿ ದಿನ ನೂರು-ಸಾಧನೆ ಹಲವಾರು ಎಂಬ 64 ಪುಟಗಳ ಪುಸ್ತಕವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆಯಾದ “ದಿನ ನೂರು-ಸಾಧನೆ ಹಲವಾರು” ಕಿರುಹೊತ್ತಿಗೆಯಲ್ಲಿ ನೂರು ದಿನಗಳಲ್ಲಿ ಕೃಷಿ ಸಚಿವರು ಮಾಡಿದ ಸಾಧನೆಗಳು, ಇಲಾಖೆಯ ಪ್ರಗತಿ, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನಗಳು ಸೇರಿದಂತೆ ಹಲವು ಅಂಶಗಳು ಅಡಕವಾಗಿವೆ.
ಮೂವತ್ತು ದಿನಗಳಲ್ಲಿ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕೃಷಿ, ತೋಟಗಾರಿಕೆ ಮತ್ತು ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪ್ರತಿ ಜಿಲ್ಲೆಯಲ್ಲಿ ಕೋವಿಡ್-19 ರೈತನ ಮೇಲೆ ಬೀರಿರುವ ಪರಿಣಾಮವೇನು? ಕೃಷಿ ಚಟುವಟಿಕೆಯ ಸ್ಥಿತಿಗತಿ ಹೇಗಿದೆ? ಅನ್ನದಾತನಿಗೆ ಈ ಸಂದರ್ಭದಲ್ಲಿ ಹೇಗೆ ನೆರವಾಗಿರುವುದು ಎಂಬ ಬಗ್ಗೆ ಹೇಳಲಾಗಿದೆ.
ಏಪ್ರಿಲ್ 7 ರಂದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಮಳೆ-ಗಾಳಿಯಿಂದ ಭತ್ತದ ಪೈರು ನಾಶವಾಗಿರುವುದನ್ನು ಸರ್ಕಾರದ ಗಮನಕ್ಕೆ ತಂದಿದ್ದು, ನಂತರ ಹಾನಿಗೀಡಾದ ಭತ್ತದ ಬೆಳೆಗಾರರಿಗೆ 45 ಕೋಟಿ.ರೂ. ಪರಿಹಾರ ಘೋಷಣೆಯಾಗಿದೆ. ರಾಜ್ಯಾದ್ಯಂತ ಹೂವಿನ ಬೆಳೆಗಾರರಿಗೆ ನಿರ್ಬಂಧಿತ ಅವಧಿಯಲ್ಲಾದ ಹಾನಿಗೆ 12,735 ಹೆಕ್ಟೇರ್ ಪ್ರದೇಶದಲ್ಲಿ ಹೂಬೆಳೆಗಾರರಿಗೆ 31.83 ಕೋಟಿ ರೂ.ಗಳ ಅನುದಾನ ಘೋಷಣೆಯಾಗಿದೆ.
ರಾಜ್ಯದ ಗದಗ, ಧಾರವಾಡ, ರಾಯಚೂರು, ಹಾವೇರಿ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹತ್ತಿ ಮಾರುಕಟ್ಟೆ ಪ್ರಾರಂಭ, ಕೆಎಂಎಫ್ ಮೂಲಕ ಒಟ್ಟು 20 ಸಾವಿರ ಟನ್ ಮೆಕ್ಕೆಜೋಳವನ್ನು ಕ್ವಿಂಟಾಲ್ಗೆ ರೂ. 1760 ರಂತೆ ಖರೀದಿ, ಸಹಕಾರ ಇಲಾಖೆಯಿಂದ ರೈತರಿಗೆ 1200 ಕೋಟಿ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕ್ರಮ, ರಾಜ್ಯದ 4 ಕೃಷಿ ವಿಶ್ವವಿದ್ಯಾಲಯಗಳಲ್ಲಿ ಆನ್ಲೈನ್ ತರಗತಿ, ವಿಜ್ಞಾನ ಕೇಂದ್ರಗಳ ಮೂಲಕ ರೈತರಿಂದ ಸುಮಾರು 8.75 ಕೋಟಿ ರೂ.ಗಳ ಮೌಲ್ಯದ 2065 1ಟನ್ ತರಕಾರಿ ಮತ್ತು 11.89 ಕೋ.ರೂ.ಗಳ ಮೌಲ್ಯದ ಸುಮಾರು 6875 ಟನ್ ಹಣ್ಣುಗಳನ್ನು ನೇರವಾಗಿ ಖರೀದಿ ಗ್ರಾಹಕರಿಗೆ ಒದಗಿಸಲಾಯಿತು ಎನ್ನುವ ವಿವರವನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.
ಕೋವಿಡ್ ನಿಂದ ರೈತರ ಚಟುವಟಿಕೆ, ಪರಿಕರ ಸಾಗಾಣಿಕ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ‘ಅಗ್ರಿವಾರ್’ ರೂಮ್ ತೆರೆದು ಕೇಂದ್ರ ಸರ್ಕಾರ ಮೆಚ್ಚುವಂತೆ ಹಾಗೂ ಆಂಧ್ರ, ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳೂ ಸಹ ಪ್ರಶಂಸೆ ಪಡುವಂತೆ ರೈತರಿಗೆ ನೆರವಾಗಿರುವುದು. ಕಳಪೆ ಬಿತ್ತನೆ ಬೀಜ ಮಾರಾಟ ಜಾಲವನ್ನು ಬುಡಸಮೇತ ಕಿತ್ತುಹಾಕಲು ಶಪಥ ತೊಟ್ಟು ಸುಮಾರು 11 ಕೋಟಿಗಿಂತಲೂ ಹೆಚ್ಚಿನ ಮೌಲ್ಯದ ಕಳಪೆ ಬಿತ್ತನೆ ಬೀಜಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಿರುವುದು ದಾಖಲಾಗಿದೆ. ಕಳಪೆ ರಸಗೊಬ್ಬರ ಕ್ರಿಮಿನಾಶಕವೂ ಮಾರಾಟವಾಗದಂತೆ ಕ್ರಮ, ಮೆಕ್ಕೆಜೋಳ ಬೆಳೆದ ರೈತನಿಗೆ 5 ಸಾವಿರ ರೂ.ಗಳಂತೆ ಹತ್ತು ಲಕ್ಷ ರೈತರಿಗೆ 500 ಕೋಟಿ ರೂ.ಐತಿಹಾಸಿಕ ಪ್ಯಾಕೇಜ್ ಘೋಷಣೆಯ ಪ್ರಸ್ತಾಪ ಮಾಡಲಾಗಿದೆ.
ಈ 100 ದಿನಗಳಲ್ಲಿ ತಾವು ಇಟ್ಟಿರುವ ಹೆಜ್ಜೆಗಳನ್ನು ಈ ಕಿರುಹೊತ್ತಿಗೆ ಹೊಂದಿದ್ದು, ಇದು ಸಾಧನೆಯಲ್ಲ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ ಹೆಜ್ಜೆಗಳು. ಸರ್ಕಾರ ಎಂದಿಗೂ ರೈತರ ಜೊತೆಯಿದೆ. ಎಂದಿಗೂ ಅನ್ನದಾತರೊಂದಿಗೆ ತಾವಿದ್ದು, ಕೃಷಿ ಅಭಿವೃದ್ಧಿಗೆ ತಾವು ದುಡಿಯುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲರು ತಿಳಿಸಿದ್ದಾರೆ.
ಇದೇ ವೇಳೆ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವರ 100 ದಿನಗಳ ಸಾಧನೆಯ 64 ಪುಟಗಳ ಪುಸ್ತಕವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ ಮಾಡಿದರು. ನೂರು ದಿನಗಳ ಸಾಧನೆ ಪುಸ್ತಕದಲ್ಲಿ, ಕೋವಿಡ್-19 ಸಂದರ್ಭದಲ್ಲಿ ರೈತರಿಗೆ ನೆರವಾದ ವಿಚಾರಗಳನ್ನು ವಿವರಿಸಲಾಗಿದೆ. ಮೂರು ಇಲಾಖೆ ಅಡಿಯಲ್ಲಿ ಕೈಗೊಂಡ ಕಾರ್ಯಕ್ರಮದ ಬಗ್ಗೆ ತಿಳಿಸಲಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ರೇಷ್ಮೆ ಬೆಳೆಗಾರರಿಗೆ ಸರಕಾರ ಘೋಷಿಸಿದ ಅನುದಾನದ ವಿವರವನ್ನು ನೀಡಲಾಗಿದೆ. 50,083 ಹೆಕ್ಟೇರ್ ನಲ್ಲಿ ತರಕಾರಿ ಹಾಗೂ 41,053 ಹೆಕ್ಟೇರ್ ನಲ್ಲಿ ಹಣ್ಣು ಬೆಳೆದ ರೈತರಿಗೆ 137 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಪೌರಾಡಳಿತ ಇಲಾಖೆ ಅಡಿ ರಾಜ್ಯಾದ್ಯಂತ ಕೋವಿಡ್-19 ಸಂದರ್ಭದಲ್ಲಿ ಕೈಗೊಂಡ ಕ್ರಮದ ಬಗ್ಗೆ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ.