ಬೆಂಗಳೂರು: ಪ್ರವಾಹಪೀಡಿತ ಐದು ಜಿಲ್ಲೆಗಳ ಜಿಲ್ಲಾಧಿಕರಿಗಳ ಜತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.
ಐದು ಜಿಲ್ಲೆಗಳ ಡಿಸಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪ್ರವಾಹ ಸ್ಥಿತಿ, ಮಳೆ ಅನಾಹುತಗಳ ಬಗ್ಗೆ ಮಾಹಿತಿ ಪಡೆದರು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುತ್ತಿರುವ ಪ್ರವಾಹ ಹಿನ್ನೆಲೆ ವೈಮಾನಿಕ ಸಮೀಕ್ಷೆಗೂ ಮುನ್ನ ಪ್ರವಾಹಪೀಡಿತ ಜಿಲ್ಲೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಪ್ರವಾಹದಿಂದಾಗಿ ಆದ ಅನಾನುಕೂಲ, ಈವರೆಗೂ ಕೈಗೊಂಡ ಮುಂಜಾಗೃತಾ ಕ್ರಮಗಳ ಬಗ್ಗೆ ಸಿಎಂ ಸಮಾಲೋಚನೆ ನಡೆಸಿದರು. ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.
ನಾಳೆ ಪ್ರವಾಹಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ:
ಕೃಷ್ಣಾ ನದಿ ಪ್ರವಾಹದಿಂದ ಬೆಳಗಾವಿ ಮತ್ತು ವಿಜಯಪುರದಲ್ಲಿ ಮುಳುಗಡೆ ಆಗಿರುವ ಕೆಲ ಹಳ್ಳಿಗಳ ಪ್ರದೇಶಗಳ ಸ್ಥಿತಿಗತಿಗಳನ್ನು ವೀಕ್ಷಿಸಲು ನಾಳೆ ಬೆಳಗ್ಗೆ 10 ಗಂಟೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ವೈಮಾನಿಕ ವೀಕ್ಷಣೆ ಮಾಡಲಿದ್ದಾರೆ.
ತಮ್ಮ ನಿವಾಸ ಧವಳಗಿರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಮಳೆಯಿಲ್ಲದಿದ್ದರೆ, ಬೆಳಗ್ಗೆ10 ಗಂಟೆಗೆ ಹೆಲಿಕಾಪ್ಟರ್ನಲ್ಲಿ ವಿಜಯಪುರ ಮತ್ತು ಬೆಳಗಾವಿಗೆ ತೆರಳಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸುವುದಾಗಿ ತಿಳಿಸಿದರು. ನಿರಾಶ್ರಿತ ಕೇಂದ್ರಗಳಿಗೆ ಭೇಟಿ ಕೊಟ್ಟು ಸಮಸ್ಯೆಗಳನ್ನು ಆಲಿಸುತ್ತೇನೆ. ಅವರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಸೂಕ್ತ ವ್ಯವಸ್ಥೆ ಮಾಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.