ಬೆಂಗಳೂರು: ಸಿಎಂ ಯಡಿಯೂರಪ್ಪ ಸಚಿವ ಮಾಧುಸ್ವಾಮಿ ರಾಜೀನಾಮೆ ಪಡೆಯಬೇಕು ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ದಿವಂಗತ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತ ಮಹಿಳೆಗೆ ಸಚಿವ ಮಾಧುಸ್ವಾಮಿ ಅವಹೇಳನಕಾರಿ ಹೇಳಿಕೆಗೆ ಅವರೇ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ಕೆ.ಪಿ.ಸಿ.ಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಮಾಧುಸ್ವಾಮಿಯವರದ್ದು ಇದು ಮೊದಲಲ್ಲ. ಈ ಹಿಂದೆಯೂ ಅವರು ಇದೇ ವರ್ತನೆ ತೋರಿದ್ದಾರೆ. ರೈತ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಹೋಗಿದ್ದಾರೆ. ಅವರ ವಿರುದ್ಧ ದರ್ಪದಿಂದ ನಡೆದುಕೊಂಡಿದ್ದಾರೆ. ಸಚಿವರು ಅಂದರೆ ಮಹಾರಾಜರೇನಲ್ಲ. ತೆರಿಗೆ ಹಣದಿಂದಲೇ ವೇತನ, ಮನೆ,ಗಾಡಿ ಸಿಗುತ್ತಿದೆ. ವಿಧಾನಸೌಧ ಮಂತ್ರಿಗಳದ್ದೇನಲ್ಲ. ವಿಧಾನಸೌಧ ಇರೋದು ಜನರಿಂದಾಗಿಯೇ. ಮುಖ್ಯ ಮಂತ್ರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ದಿವಂಗತ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ನಿಮಿತ್ತ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ನಾಯಕರು ಪುಷ್ಟ ನಮನ ಸಲ್ಲಿಸಿದರು.