ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.
ಕುಮಾರಕೃಪಾ ಅತಿಥಿಗೃಹಕ್ಕೆ ಭೇಟಿ ನೀಡಿದ ಸಿಎಂ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ರಾಜ್ಯದ ಪರ ಸ್ವಾಗತಿಸಿ, ಹೂವಿನ ಹಾರ ಹಾಕಿ ಗೌರವಿಸಿದರು. ಸಿಎಂ ಬಿಎಸ್ವೈ ಅವರಿಂದ ಗೌರವ ಸ್ವೀಕಾರ ಮಾಡಿದ ಉಪ ರಾಷ್ಟ್ರಪತಿ, "ಕೊರೊನಾ ಕಾರಣದಿಂದಾಗಿ ಕಳೆದ 10 ತಿಂಗಳಲ್ಲಿ ಯಾರಿಂದಲೂ ಹಾರ ಸ್ವೀಕರಿಸಿರಲಿಲ್ಲ. ನಿಮ್ಮಿಂದ ಈಗ ಸ್ವೀಕರಿಸುತ್ತಿದ್ದೇನೆ." ಎನ್ನುತ್ತಾ ನಗುಮೊಗದಿಂದ ಪ್ರತಿಕ್ರಿಯೆ ನೀಡಿದರು.
ಬಳಿಕ ಕುಮಾರಕೃಪಾ ಆವರಣದಲ್ಲಿಯೇ ವೆಂಕಯ್ಯ ನಾಯ್ಡು ಅವರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು. ಉಭಯ ಕುಶಲೋಪರಿ ವಿಚಾರಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ. ಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.