ಬೆಂಗಳೂರು : ಉಪ ಸಭಾಪತಿ ಧರ್ಮೇಗೌಡರ ಅಕಾಲಿಕ ನಿಧನ ಆಘಾತವನ್ನು ತಂದಿದೆ. ಪಾರ್ಥೀವ ಶರೀರದ ದರ್ಶನ ಮಾಡಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರ ಅಕಾಲಿಕ ಮರಣ ಇಡೀ ನಾಡಿನ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಗ್ರಾಮ ಪಂಚಾಯತ್‌ನಿಂದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕೆಲಸ ಮಾಡಿ ಸಹಕಾರಿ ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿ, ವಿಧಾನಸಭೆ ಸದಸ್ಯರಾಗಿ, ವಿಧಾನಪರಿಷತ್ತಿನ ಉಪಸಭಾಪತಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಅಕಾಲಿಕ ಮರಣ ತುಂಬಾ ಆಘಾತ ತಂದಿದೆ ಎಂದರು.
ಇಂದು ಮೃತರ ಸ್ವಗ್ರಾಮಕ್ಕೆ ಭೇಟಿ ನೀಡಲಿದ್ದು, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಬರುತ್ತೇನೆ, ಅವರದು ತುಂಬಾ ದೊಡ್ಡ ಕುಟುಂಬ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬರೆದಿರುವ ಪತ್ರ ಸಿಕ್ಕಿದೆ. ಆಸ್ತಿ ಹಂಚಿಕೆ ಕುರಿತು ಅದರಲ್ಲಿ ಬರೆದಿದ್ದಾರೆ ಎಂದ ಸಿಎಂ, ರಾಜಕೀಯ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.