ಬೆಂಗಳೂರು: ನಾಡಿನಲ್ಲೆಡೆ ಇಂದು ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿದ್ದು, ನಗರದಾದ್ಯಂತ ಕ್ರೈಸ್ತ ಬಾಂಧವರು ಕೊರೊನಾ ಹಿನ್ನೆಲೆ ಹಬ್ಬ ಸರಳವಾದರೂ ಸಂಭ್ರಮದಿಂದ ಆಚರಿಸಿದ್ದು ಕಂಡುಬಂತು.
ಪ್ರತಿವರ್ಷ ಕ್ರಿಸ್ಮಸ್ ಹಬ್ಬದಂದು ಪ್ರಾರ್ಥನೆ ಮುಗಿದ ನಂತರ ಮಧ್ಯರಾತ್ರಿ ಪಟಾಕಿಗಳನ್ನು ಸಿಡಿಸಿ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕ್ರೈಸ್ತ ಬಾಂಧವರು ಸರಳ ಆಚರಣೆಯ ಮೊರೆ ಹೋಗಿದ್ದಾರೆ. ಇನ್ನು ಚರ್ಚ್‌ಗಳಲ್ಲಿ ಪ್ರತಿ ಬಾರಿಯ ಪ್ರಾರ್ಥನೆಗೆ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹಾಗೂ ಅಲ್ಲಿ ಕೋವಿಡ್ ನಿಯಮಗಳ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಲಾಯಿತು.
ಇನ್ನು ಪ್ರತಿ ಚರ್ಚ್ನಲ್ಲಿದ್ದ ಸ್ವಯಂ ಸೇವಕರು ಚರ್ಚ್‌ಗೆ ಬರುವ ಪ್ರತಿಯೊಬ್ಬರನ್ನೂ ಪರೀಕ್ಷಿಸಿ, ಸ್ಯಾನಿಟೈಸರ್ ಬಳಸುವಂತೆ ಸೂಚಿಸಿ ಮತ್ತು ಮಾಸ್ಕ ಧರಿಸಿ ಬಂದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದರು.