ಬೆಂಗಳೂರು : ಈ ವರ್ಷ ಮೊದಲ ಚಳಿಗಾಲದ ಕುದುರೆ ರೇಸ್ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ರೇಸ್ ಕೋರ್ಸ್ನ ವಿಲ್ ಟು ವಿನ್ ಕುದುರೆ ಬಿದ್ದ ಕಾರಣ ದೊಡ್ಡ ದಾಂಧಲೆ ಸೃಷ್ಟಿಯಾಗಿತ್ತು. ಈ ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಇದೀಗ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಎಸಿಪಿ ನಾಗರಾಜು ಅವರ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದ್ದು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣದ ಕುರಿತು ತನಿಖೆಗೆ ವಿಲ್ ಟು ವಿನ್ ಕುದುರೆಯ ಮಾಲೀಕ ಸಂಜಯ್.ಆರ್.ಠಕ್ಕರ್, ಕುದುರೆ ಟ್ರೈನರ್ ಪಾರ್ವತಿ.ಡಿ.ಭೈರಾಂಜಿ, ಕುದುರೆ ಜಾಕಿ ಸೂರಜ್ ಸೇರಿ ಹಲವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ತನಿಖೆ ವೇಳೆ ಕುದುರೆಯನ್ನು ಉದ್ದೇಶಪೂರ್ವಕವಾಗಿ ಬೀಳಿಸಲಾಗಿದೆ ಎಂದು ಕುದುರೆ ಮೇಲೆ ಬೆಟ್ಟಿಂಗ್ ಕಟ್ಟಿದ ಬಾಜಿಗಾರರು ಈ ವಿಚಾರವಾಗಿ ಅಧಿಕಾರಿ ಎದುರು ಆರೋಪ ಮಾಡಿದ್ದರು. ಈ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.