ಬೆಂಗಳೂರು: ರಾಷ್ಟ್ರೀಯ ನಾಯಕರು ಪ್ರವಾಸ ರದ್ದುಗೊಳಿಸಿದ ಹಿನ್ನೆಲೆ ಇಂದು ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆಯಬೇಕಿದ್ದ ಸಭೆ ರದ್ದಾಗಿದೆ.
ಹೈದರಾಬಾದ್‌ನಿಂದ ನಿನ್ನೆ ರಾತ್ರಿ ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ಗುಲಾಂ ನಬಿ ಆಜಾದ್ ಇಂದು ಬೆಳಗ್ಗೆ 7 ಗಂಟೆಗೆ ತೆರಳಿದ್ದಾರೆ. ಇವರೊಂದಿಗೆ ಶಾಸಕರು ವಿಧಾನಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಲು ಆಗಮಿಸಬೇಕಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಕೂಡ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಮಹತ್ವದ ಸಭೆ ರದ್ದಾಗಿದೆ.
ಒಬ್ಬ ಪಕ್ಷೇತರ ಸೇರಿ 14 ಕಾಂಗ್ರೆಸ್ ಶಾಸಕರ ಶಾಸಕತ್ವ ಅನರ್ಹತೆ ಹಿನ್ನೆಲೆ, ಇವರ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಅಭ್ಯರ್ಥಿಗಳ ಆಯ್ಕೆ, ಅನರ್ಹತೆಯಿಂದ ರದ್ದಾಗಿರುವ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದು ಅಥವಾ ಜೆಡಿಎಎಸ್ಗೆ ಬೆಂಬಲ ನೀಡುವುದರ ಕುರಿತು ನಿರ್ಧರಿಸುವ ಬಗ್ಗೆ ಚರ್ಚೆ ನಡೆಯಬೇಕಿತ್ತು. ಅಲ್ಲದೆ ಜೆಡಿಎಸ್ ಜೊತೆ ಮೈತ್ರಿ ಮುಂದುವರಿಸಬೇಕೋ ಬೇಡವೋ ಎಂಬ ನಿರ್ಧಾರವೂ ಸಹ ಈ ಸಭೆಯಲ್ಲಿ ಚರ್ಚೆಯಾಗಬೇಕಿತ್ತು ಅಂತಾ ಹೇಳಲಾಗ್ತಿದೆ.
ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿ ಮಾಡುವ ಸಲುವಾಗಿ ಹಿರಿಯ ನಾಯಕರೊಬ್ಬರನ್ನು ಪ್ರತಿ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕಿದ್ದು, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಡಾ. ಜಿ ಪರಮೇಶ್ವರ್ ಹಾಗೂ ಹೆಚ್ ಕೆ ಪಾಟೀಲ್ ನಡುವೆ ಈ ಸ್ಥಾನಕ್ಕಾಗಿ ಪೈಪೋಟಿ ಇದೆ. ಆದರೆ, ಶಾಸಕರ ಒಲವು ಯಾರ ಕಡೆ ಇದೆ ಎಂಬುದನ್ನು ಆಧರಿಸಿ ನಾಯಕರ ಆಯ್ಕೆ ಆಗಬೇಕಿದೆ. ಈ ವಿಚಾರ ಕೂಡ ಇಂದಿನ ಸಭೆಯಲ್ಲಿ ನಡೆಯಬೇಕಿತ್ತು. ಆದರೆ, ಇಂದಿನ ಸಭೆ ರದ್ಧಾದ ಹಿನ್ನೆಲೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ.