ಅಹಮದಾಬಾದ್/ಬೆಂಗಳೂರು: ಗುಜರಾತ್ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿರುವ ಏಕತೆಯ ಪ್ರತಿಮೆಯನ್ನು ವೀಕ್ಷಣೆ ಮಾಡಿದರು.
ಗುಜರಾತ್ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಸಲು ಹೈಕಮಾಂಡ್ ರಚಿಸಿರುವ ವೀಕ್ಷಕರ ತಂಡದ ಸದಸ್ಯರಾಗಿ ಗುಜರಾತ್ ನ ಅಹಮದಾಬಾದ್ ತೆರಳಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಗುಜರಾತ್ ನ ನರ್ಮದಾ ತಟದಲ್ಲಿ ತಲೆ ಎತ್ತಿರುವ 597 ಅಡಿ ಎತ್ತರದ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆಯನ್ನು ವೀಕ್ಷಿಸಿದರು.
ಪ್ರತಿಮೆ ವೀಕ್ಷಣೆ ನಂತರ ವೀಕ್ಷಕರ ಅಭಿಪ್ರಾಯ ದಾಖಲಿಸುವ ಕಡತದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಯಡಿಯೂರಪ್ಪ, ಸರ್ದಾರ್ ಪಟೇಲ್ ಅವರ ಶ್ರೇಷ್ಠತೆ ಮತ್ತು ಸಾಧನೆಗಳನ್ನು ಪ್ರದರ್ಶಿಸುವ ಏಕತೆಯ ಪ್ರತಿಮೆಯನ್ನು ಅತ್ಯುತ್ತಮ ಜಾಗತಿಕ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರತಿಯೊಬ್ಬರೂ ಭೇಟಿ ನೀಡಲೇಬೇಕಾದ ಸ್ಥಳ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಗುಜರಾತ್ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭ: ಸಿಎಂ ಬೊಮ್ಮಾಯಿ, ಬಿಎಸ್ವೈ ಭಾಗಿ