ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ವೇಳೆ ಬಿಜೆಪಿಯಿಂದ ಶಿಸ್ತು ಪಾಲನೆ ಕಂಡುಬಂತು. ಆದರೆ ಜೆಡಿಎಸ್ ಮರೆತಿದ್ದು, ಕಾಂಗ್ರೆಸ್ ನಿಯಮ ಮೀರಿ ವರ್ತಿಸಿದ್ದು ಗೋಚರಿಸಿತು.
ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೂರು ಪಕ್ಷದ ಅಭ್ಯರ್ಥಿಗಳು ಒಂದು ಗಂಟೆ ಅಂತರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಈ ಸಂದರ್ಭ ಒಂದೊಂದು ಪಕ್ಷಗಳ ಮುಖಂಡರಿಂದ ಒಂದೊಂದು ರೀತಿಯ ನಡವಳಿಕೆ ಗೋಚರಿಸಿತು. ಬಿಜೆಪಿ ಅಭ್ಯರ್ಥಿ ಜೊತೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಹಾಗೂ ಸಚಿವ ಆರ್.ಅಶೋಕ್ ಹೊರತುಪಡಿಸಿದರೆ ಪಕ್ಷಕ್ಕೆ ಸಂಬಂಧಿಸಿದ ಯಾವೊಬ್ಬ ನಾಯಕರಾಗಲೀ, ಕಾರ್ಯಕರ್ತರಾಗಲೀ ನಾಮಪತ್ರ ಸಲ್ಲಿಕೆ ಕೇಂದ್ರದಿಂದ 100 ಮೀಟರ್ ವ್ಯಾಪ್ತಿಯ ಒಳಗೆ ಪ್ರವೇಶಿಸಲಿಲ್ಲ.
ಅತ್ಯಂತ ಅಚ್ಚುಕಟ್ಟಾಗಿ ಆಗಮಿಸಿದ ನಾಯಕರು ಅಭ್ಯರ್ಥಿಯೊಂದಿಗೆ ನಾಮಪತ್ರ ಸಲ್ಲಿಸಿ ವಾಪಸ್ ತೆರಳಿದರು. ಆದರೆ ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದ ಸಂದರ್ಭ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ವಾಪಸ್ ತೆರಳುವ ಸಂದರ್ಭ ಒಂದಿಷ್ಟು ಗೊಂದಲ ಹಾಗೂ 50 ಅಡಿ ಅಂತರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮುಂದಾಗಿದ್ದು, ಪಕ್ಷದ ಒಂದಿಷ್ಟು ಕಾರ್ಯಕರ್ತರು ಕೂಡ 100 ಮೀಟರ್ ಆವರಣದ ಒಳಗೆ ಆಗಮಿಸಿದ್ದು ಗೋಚರಿಸಿತು. ಒಂದು ಹಂತಕ್ಕೆ ಜೆಡಿಎಸ್ ಕಾರ್ಯಕರ್ತರ ಓಡಾಟ ಅತಿ ಅನ್ನಿಸಿದರೂ, ವಾಪಸ್ ತೆರಳುವ ಸಂದರ್ಭವಾದ್ದರಿಂದ ಪೊಲೀಸರು ಇವರನ್ನು ಒಂದಿಷ್ಟು ಹಂತದವರೆಗೆ ನಿಭಾಯಿಸಿದರು.
ವಾತಾವರಣ ಕೆಡಿಸಿದ ಕಾಂಗ್ರೆಸ್
ನಾಮಪತ್ರ ಸಲ್ಲಿಕೆಗೆ ರಾಜರಾಜೇಶ್ವರಿ ನಗರ ಬಿಎಸ್ಎನ್ಎಲ್ ಕಚೇರಿ ಕಡೆಯಿಂದ ಆಗಮಿಸಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಂದ ಒಂದಿಷ್ಟು ಶಿಸ್ತು ಪಾಲನೆ ಕಂಡು ಬಂದಿತು. ಆದರೆ, ವಿರುದ್ಧ ದಿಕ್ಕು ಅಂದರೆ ಗ್ಲೋಬಲ್ ಕಾಲೇಜ್ ಕಡೆಯಿಂದ ಆಗಮಿಸಿದ ಕಾಂಗ್ರೆಸ್ ನಾಯಕರಿಂದ ನಿಯಮ ಸಂಪೂರ್ಣ ಗಾಳಿಗೆ ತೂರಲ್ಪಟ್ಟಿತ್ತು. ನಾಮಪತ್ರಸಲ್ಲಿಕೆಗೆ ಗುರುತಿಸಲಾಗಿದ್ದ ಬಿಬಿಎಂಪಿ ಕಚೇರಿ ಮುಂಭಾಗದವರೆಗೂ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಹಾಗೂ ಸಿದ್ದರಾಮಯ್ಯ ಮತ್ತಿತರ ನಾಯಕರಿದ್ದ ವಾಹನ ಆಗಮಿಸಿತ್ತು. ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಎಷ್ಟೇ ಮನವಿ ಮಾಡಿದರು ಕಾಂಗ್ರೆಸ್ ಮುಖಂಡರನ್ನು ಸುಲಭವಾಗಿ ಆಚೆ ಕಳುಹಿಸಲು ಸಾಧ್ಯವಾಗಲಿಲ್ಲ.
ಮಾಜಿ ಸಚಿವರು, ಶಾಸಕರು, ಮಹಿಳಾ ನಾಯಕಿಯರು, ಪಕ್ಷದ ವತಿಯಿಂದ ಉಪಚುನಾವಣೆಗೆ ನಿಯೋಜಿತರಾದ ವೀಕ್ಷಕರು, ಒಂದಿಷ್ಟು ಕಾರ್ಯಕರ್ತರು ಕೂಡ ಪಕ್ಷದ ಧ್ವಜ ಹಿಡಿದು ಬಿಬಿಎಂಪಿ ಕಚೇರಿ ಮುಂಭಾಗ ತುಂಬಿಕೊಂಡರು. ಸಿದ್ದರಾಮಯ್ಯ ಹಾಗೂ ಕುಸುಮ ಮತ್ತು ಹನುಮಂತರಾಯಪ್ಪ ಬಿಬಿಎಂಪಿ ಕಚೇರಿ ಒಳಭಾಗಕ್ಕೆ ತೆರಳುವ ಸಂದರ್ಭ ಇನ್ನಷ್ಟು ಮುಖಂಡರು ಒಳ ಪ್ರವೇಶಕ್ಕೆ ಪ್ರಯತ್ನಿಸಿದರು.
ಮಾಜಿ ಸಚಿವರಾದ ಯು.ಟಿ.ಖಾದರ್, ಹೆಚ್.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ತಡೆದು ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ.
ಕೋವಿಡ್ ನಿಯಮ ಉಲ್ಲಂಘನೆ
ರಾಜ್ಯ ಕಾಂಗ್ರೆಸ್ ನಾಯಕರಿಂದ ಮತ್ತೊಮ್ಮೆ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆಯಿತು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಬಿಬಿಎಂಪಿ ಕಚೇರಿ ಮುಂಭಾಗ ನಮ್ಮ ರಾಜ್ಯ ನಾಯಕರ ಜೊತೆ ಗುಂಪುಗುಂಪಾಗಿ ಓಡಾಡಿ, ರಾಜ್ಯದಲ್ಲಿ ಕೊರೊನಾ ಸಂಪೂರ್ಣ ಕಡಿಮೆಯಾಗಿದೆಯೇನೋ ಎಂಬ ಭಾವನೆ ಮೂಡುವಂತೆ ಮಾಡಿದರು. ಒಂದು ಹಂತದಲ್ಲಿ ಇವರನ್ನು ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರು ಕೈಚೆಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಯಿತು.
ಒಂದು ಹಂತದಲ್ಲಿ ನಿಯಂತ್ರಣದಲ್ಲಿದ್ದ ಸಾಮಾಜಿಕ ಅಂತರ, ಮುನ್ನೆಚ್ಚರಿಕೆ ಕ್ರಮಗಳು ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದಂತೆ ಸಂಪೂರ್ಣ ಮಣ್ಣುಪಾಲಾಯಿತು. ನಾಮಪತ್ರ ಸಲ್ಲಿಕೆಗೆ ಮುನ್ನ ಹಾಗೂ ನಂತರ ಗ್ಲೋಬಲ್ ಕಾಲೇಜಿನಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲಿಯೂ ಸಾಮಾಜಿಕ ಅಂತರ ಕಾಣಸಿಗಲಿಲ್ಲ.